ಮಂಗಳೂರು: ಕೋಟಿ ಕೋಟಿ ವಂಚನೆ ಮಾಡಿ, ಮನೆಯ ಅಡಗುದಾಣದಲ್ಲಿ ತಲೆಮರೆಸಿದ್ದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಜಪ್ಪಿನಮೊಗರು ತಂದೊಳಿಗೆ ನಿವಾಸಿ ರೋಷನ್ ಸಲ್ದಾನ್ಹಾ (45) ಎಂದು ಗುರುತಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಈತನ ವಿರುದ್ಧ 2 ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಕಮೀಷನರ್ ಅವರು ಆರೋಪಿಯ ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದ್ದರು.

ಆರೋಪಿಯೂ ನಾನು ಶ್ರೀಮಂತ ವ್ಯಕ್ತಿ ಎಂದು ಬಿಂಬಿಸಿ ಹೊರ ಜಿಲ್ಲೆ, ಹೊರ ರಾಜ್ಯದ ಉದ್ಯಮಿಗಳನ್ನು ಪರಿಚಯಿಸಿಕೊಂಡು ಭೂ ವ್ಯವಹಾರ ಮತ್ತು ಬ್ಯಾಂಕ್ ಸಾಲ ಮಾಡಿಸಿಕೊಡುವ ನೆಪದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಕೋಟಿ ಕೋಟಿ ರೂಪಾಯಿ ವರೆಗೆ ಕೊಡಿಸುವುದಾಗಿ ನಂಬಿಸುತ್ತಿದ್ದ ಎನ್ನಲಾಗಿದೆ. ಮಾತ್ರವಲ್ಲದೇ ಈತ ಬಳಿಕ ಸ್ಟ್ಯಾಂಪ್ ಡ್ಯೂಟಿ ಎಂದು 5ಕೋ.ರೂಪಾಯಿ ವರೆಗೂ ನಗದು ರೂಪದಲ್ಲಿ ಪಡೆದು ಬಳಿಕ ತಲೆ ಮರೆಸಿಕೊಳ್ಳುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಕಳೆದ 3 ತಿಂಗಳಲ್ಲಿ ಆತನ ಖಾತೆಯಲ್ಲಿ 40 ಕೋ.ರೂ. ವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಪೊಲೀಸರ ದಾಳಿ ವೇಳೆ ಆತ ಮನೆಯಲ್ಲಿ ಮಲೇಶ್ಯಾ ಮೂಲದ ಯುವತಿ ಯೊಬ್ಬಳು ಪತ್ತೆಯಾಗಿದ್ದಾಳೆ. ಆಕೆಯ ಜೊತೆಗೆ ಮದ್ಯ ಸೇವನೆ ಮಾಡುತ್ತಿದ್ದ ಎನ್ನಲಾಗಿದೆ ಇದೇ ವೇಳೆ ಪೊಲೀಸರನ್ನು ಕಂಡು ಓರ್ವ ಓಡಿ ಹೋಗಿದ್ದು ಆತನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಆರೋಪಿಯೂ ತನ್ನ ಮನೆಯನ್ನು ಐಷಾರಾಮಿ ಬಂಗಲೆ ಮಾಡಿಕೊಂಡಿದ್ದು, ಮನೆಯೊಳಗೆ ವಿದೇಶಿ ಮದ್ಯ ಸಹಿತ ದೇಶೀಯ ಮದ್ಯ ಪತ್ತೆಯಾಗಿದೆ. ಮನೆಯಲ್ಲಿ ಅಡಗಿ ಕುಳಿತು ಕೊಳ್ಳಲು ಅಡಗುದಾಣವನ್ನು ಮಾಡಿದ್ದು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಇದು ಅಡಗುದಾಣ ಎಂದು ತಿಳಿಯುವುದು. ಪೊಲೀಸರ ದಾಳಿಯ ವೇಳೆಯೂ ಇದೇ ಅಡಗುದಾಣದಲ್ಲಿ ತಪ್ಪಿಸಿಕೊಂಡಿದ್ದ ಆದರೆ ಆರೋಪಿ ಮನೆಯಲ್ಲೇ ಇರುವ ಬಗ್ಗೆ ಖಚಿತ ಪಡಿಸಿದ ಪೊಲೀಸರು, ಅನುಮಾನಗೊಂಡು ಒಂದು ಮರದಿಂದ ಮಾಡಿದ ಬಾಗಿಲನ್ನು ಬ್ರೇಕ್ ಮಾಡಿದ್ದಾರೆ ಈ ವೇಳೆ ಆರೋಪಿ ಪತ್ತೆಯಾಗಿದ್ದಾನೆ.

ಈ ಹಿಂದೆ ಒಂದು ವಂಚನೆ ಪ್ರಕರಣದಲ್ಲಿ ರಾಜ್ಯದ ವಿಶೇಷ ತನಿಖೆ ತಂಡ ಬಂದು ಪರಿಶೀಲನೆ ಮಾಡಿದ ವೇಳೆ ಇದೇ ಅಡಗುದಾಣದಲ್ಲಿ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ. ಆ ಸಮಯ ಆರೋಪಿ ಪತ್ತೆಯಾಗದ ಹಿನ್ನೆಲೆ ತನಿಖಾ ತಂಡ ವಾಪಾಸು ಹೋಗಿದ್ದರು. ಗೇಟ್ ಗೆ ರಿಮೋಟ್ ಕಂಟ್ರೋಲ್ ಅಳವಡಿಸಿದ್ದು, ಗೇಟ್ ಗೆ ಗ್ರೀಸ್ ಹಚ್ಚಿದ್ದ ಎನ್ನಲಾಗಿದೆ. ಮನೆಯ ಸುತ್ತ ಸಿಸಿ ಕೆಮರಾ ಅಳವಡಿಸಿದ್ದು, ಮನೆಯ ಪರಿಸರಕ್ಕೆ ಯಾರೇ ಬಂದರೂ ಆತನಿಗೆ ಮಾಹಿತಿ ದೊರೆಯುವಂತೆ ಮಾಡಿ ಕೊಂಡಿರುವುದು ಬೆಳಕಿಗೆ ಬಂದಿದೆ.

ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾರ್ಗದರ್ಶನದಲ್ಲಿ ಸೈಬರ್ ಠಾಣಾ ಎಸಿಪಿ ರವೀಶ್ ನಾಯಕ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದು, ಪೊಲೀಸರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತವಾಗಿದೆ.



