ಪುತ್ತೂರು: ಪುತ್ತೂರಿನ ಖಾಸಗಿ ಕಾಲೇಜೊಂದರ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಮುಧ್ವೇಶ ಹಾಗೂ ಹಿಂಸೆಗೆ ಪ್ರಚೋದಿಸುವಂತೆ ಭಾಷಣ ಮಾಡಿದ ಆರೋಪದ ಮೇರೆಗೆ ಡಾ. ಕಲ್ಲಡ ಪ್ರಭಾಕರ ಭಟ್ ಅವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ನಿವಾಸಿ ರಾಮಚಂದ್ರ ಕೆ. ಅವರು ನೀಡಿದ ದೂರಿನಂತೆ, ದಿನಾಂಕ 12.01.2026ರಂದು ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಉದ್ದೇಶಿಸಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವಂತಹ, ಕೋಮುಧ್ವೇಶದ ಮತ್ತು ಹಿಂಸೆಗೆ ಪ್ರಚೋದಿಸುವ ಭಾಷಣ ಮಾಡಿರುವುದಾಗಿ ಆರೋಪಿಸಲಾಗಿದೆ.
ಈ ಭಾಷಣವನ್ನು “VIKASANA TV” (ವಿಕಸನ ಟಿವಿ) ಎಂಬ ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾಷಣ ಮಾಡಿದ ಆರೋಪಿತ ವ್ಯಕ್ತಿಯ ಜೊತೆಗೆ, ಭಾಷಣವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನಲ್ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ ಆಯೋಜಕರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 10/2026 ರಂತೆ ಕಲಂ 196, 299, 302, 353(2), 3(5) BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



















