ಮಂಗಳೂರು: ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಭೀಕರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ “ದಂಡುಪಾಳ್ಯ ಗ್ಯಾಂಗ್” ಸದಸ್ಯನನ್ನು ಉರ್ವಾ ಠಾಣಾ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಚಿಕ್ಕ ಹನುಮ @ ಚಿಕ್ಕ ಹನುಮಂತಪ್ಪ @ ಕೆ. ಕೃಷ್ಣಪ್ಪ @ ಕೃಷ್ಣ (55) ಎಂದು ಗುರುತಿಸಲಾಗಿದ್ದು, ಈತ ದಂಡುಪಾಳ್ಯ ಗ್ರಾಮ, ಹೊಸಕೋಟೆ ತಾಲೂಕು, ಬೆಂಗಳೂರು ಜಿಲ್ಲೆ ಮೂಲ ನಿವಾಸಿಯಾಗಿದ್ದಾನೆ. ಇತ್ತೀಚೆಗೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಳ್ಳಿಯ ವಿಜಯನಗರ ಕಾಲೋನಿಯಲ್ಲಿ ಅಡಗಿದ್ದ ಈತನನ್ನು ಮಂಗಳೂರಿನ ಉರ್ವಾ ಪೊಲೀಸರು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಈ ಪ್ರಕರಣವು ಉರ್ವಾ ಪೊಲೀಸ್ ಠಾಣಾ ಅ.ಕ್ರ. 113/1997, ಕಲಂ 460, 396, 400 ಐಪಿಸಿ ಅಡಿಯಲ್ಲಿ ದಾಖಲಾಗಿದ್ದು, 1997ರ ಅಕ್ಟೋಬರ್ 11ರ ಮಧ್ಯರಾತ್ರಿ ಉರ್ವಾ ಮಾರಿಗುಡಿ ಕ್ರಾಸ್ ಬಳಿಯ ಅನ್ವರ್ ಮಹಲ್ ಎಂಬ ಮನೆಗೆ ದಂಡುಪಾಳ್ಯ ಗ್ಯಾಂಗ್ ನುಗ್ಗಿ, 80 ವರ್ಷದ ಶ್ರೀಮತಿ ಲೂವಿಸ್ ಡಿಮೆಲ್ಲೋ ಹಾಗೂ 19 ವರ್ಷದ ರಂಜಿತ್ ವೇಗಸ್ ಅವರನ್ನು ಕ್ರೂರವಾಗಿ ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿತ್ತು.
ಈ ಪ್ರಕರಣದ ಇತರ ಆರೋಪಿಗಳ ವಿರುದ್ಧ ತನಿಖೆ ಪೂರ್ಣಗೊಂಡು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಆದರೆ ಆರೋಪಿ ಚಿಕ್ಕ ಹನುಮ ಹೆಸರು ಬದಲಿಸಿಕೊಂಡು ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ಮಂಗಳೂರು JMFC 2ನೇ ನ್ಯಾಯಾಲಯವು 2010ರಲ್ಲಿ LPC ವಾರೆಂಟ್ ಹೊರಡಿಸಿತ್ತು.
ಬಂಧಿತ ಆರೋಪಿ ಮೇಲೆ ಕರ್ನಾಟಕ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 13 ಕೊಲೆ ಮತ್ತು ದರೋಡೆ ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದುಬಂದಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ಮಹತ್ವದ ಪತ್ತೆ ಕಾರ್ಯವನ್ನು ಉರ್ವಾ ಪೊಲೀಸ್ ಠಾಣೆಯ ನಿರೀಕ್ಷಕರಾದ ಶ್ಯಾಮ್ ಸುಂಧರ್ ಹೆಚ್.ಎಂ. ಅವರ ನೇತೃತ್ವದಲ್ಲಿ ಪಿಎಸ್ಐ ಗುರಪ್ಪ ಕಾಂತಿ, ಪಿಎಸ್ಐ ಎಲ್. ಮಂಜುಳಾ, ಎಎಸ್ಐ ವಿನಯ ಕುಮಾರ್ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿ ನಡೆಸಿದ್ದಾರೆ. ಈ ಪ್ರಕರಣ ಪತ್ತೆಗೆ ಶ್ರಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಶಂಸಿಸಿ, ಹೆಚ್ಚಿನ ಬಹುಮಾನಕ್ಕಾಗಿ ರಾಜ್ಯ ಡಿಜಿ & ಐಜಿಪಿ ಅವರಿಗೆ ಶಿಫಾರಸು ಮಾಡಿದ್ದಾರೆ


















