ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆಯ ಕುರಿತು ಕಳೆದ ಹಲವು ದಿನಗಳಿಂದ ವಿವಿಧ ರೀತಿಯ ಮಾತುಗಳು ಮತ್ತು ವದಂತಿಗಳು ಕೇಳಿಬರುತ್ತಿದ್ದವು. ಆದರೆ ಇದೀಗ ಆ ಎಲ್ಲಾ ವರ್ಗಾವಣೆಯ ಚರ್ಚೆಗಳಿಗೆ ಪೂರ್ಣ ವಿರಾಮ ಬಿದ್ದಿದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಅರುಣ್ ಕುಮಾರ್ ಐಪಿಎಸ್ ಅವರನ್ನು ಮುಂದಿನ ಎರಡು ವರ್ಷದವರೆಗೆ ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡುವುದಿಲ್ಲ ಎಂದು ವಿಶ್ವಾಸಾರ್ಹ ಮೂಲಗಳು ಸ್ಪಷ್ಟಪಡಿಸಿವೆ.
ಮಾತ್ರವಲ್ಲದೆ, ಮುಂದಿನ ಎರಡು ವರ್ಷಗಳ ಕಾಲ ಈ ಇಬ್ಬರು ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ಮೂಲಗಳ ಪ್ರಕಾರ, ಈ ಇಬ್ಬರು ಅಧಿಕಾರಿಗಳ ವರ್ಗಾವಣೆಯ ಕುರಿತು ಸರ್ಕಾರದ ಮಟ್ಟದಲ್ಲಿ ಯಾವುದೇ ಚರ್ಚೆಯೇ ನಡೆದಿಲ್ಲ, ಮತ್ತು ಒತ್ತಡಗಳು ಕೂಡ ಬಂದಿಲ್ಲ ಎನ್ನಲಾಗಿದೆ. ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಈ ಅಧಿಕಾರಿಗಳು ನೇಮಕವಾದ ಬಳಿಕ ಜಿಲ್ಲೆಯಲ್ಲಿ ಕಾನೂನು–ಸುವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಲಾಗಿದೆ. ಅಕ್ರಮ ಚಟುವಟಿಕೆಗಳು ಬಹುತೇಕ ಬಂದ್ ಆಗಿದ್ದು, ವಿಶೇಷವಾಗಿ ಹಲವು ವರ್ಷಗಳಿಂದ ಜಿಲ್ಲೆಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದ್ದ ಡ್ರಗ್ಸ್ ದಂಧೆಗೆ ಸಂಪೂರ್ಣ ಕಡಿವಾಣ ಬಿದ್ದಿದೆ.
ಡ್ರಗ್ಸ್ ಜಾಲದ ಮೇಲೆ ನಡೆದ ನಿರಂತರ ಕಾರ್ಯಾಚರಣೆಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಶೀಘ್ರದಲ್ಲೇ ಡ್ರಗ್ಸ್ ಮುಕ್ತ ಜಿಲ್ಲೆಯಾಗುವ ಎಲ್ಲಾ ಸಾಧ್ಯತೆಗಳು ಹತ್ತಿರವಾಗಿವೆ ಎನ್ನಲಾಗುತ್ತಿದೆ.
ಈ ಎಲ್ಲ ಹಿನ್ನೆಲೆಯನ್ನು ಗಮನಿಸಿರುವ ಮೇಲಾಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳು ಕೂಡ, ಯಾವುದೇ ಕಾರಣಕ್ಕೂ ದಕ್ಷಿಣ ಕನ್ನಡ ಜಿಲ್ಲೆಯ ಈ ಇಬ್ಬರು ಪ್ರಮುಖ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ವಿಚಾರವೇ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿರುವುದರಿಂದ, ವರ್ಗಾವಣೆಯ ಕುರಿತ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ.


















