ಮಂಗಳೂರು: ಮತ-ಧರ್ಮದ ಭೇದ ಮರೆತು ಒಟ್ಟಾಗಿ ಸೌಹಾರ್ದತೆಯಿಂದ ಮಂಗಳೂರು ಬೈಕಂಪಾಡಿ ಗ್ರಾಮದ ಬೈಕಂಪಾಡಿ ರೈಲ್ವೇ ಟ್ರ‍್ಯಾಕ್ ದಕ್ಷಿಣ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ಆರೋಪಿಗಳನ್ನು ಮಂಗಳೂರು ಸಿಸಿಬಿ ಮತ್ತು ಪಣಂಬೂರು ಪೊಲೀಸರು ವಶಕ್ಕೆ ಪಡೆದು ಅಪಾರ ನಗದು ಹಾಗೂ ಸೊತ್ತುಗಳನ್ನು ಜಪ್ತಿ ಮಾಡಿದ್ದಾರೆ.
ಸ್ಥಳೀಯ ನಿವಾಸಿಗಳಾದ ಮಹಮ್ಮದ್ ಹನೀಫ್, ಜಾಕೀರ್ ಅಹಮ್ಮದ್, ವಿಲ್ಪ್ರೇಡ್ ಡಿಸೋಜಾ, ಅನಿಲ್ ಕುಮಾರ್, ಮುರ್ತೋಝ ಇಮಾಮ್ ಸಾಬ್, ಶಶಿ ದೇವಾಡಿಗ, ಮೈಲಾರಪ್ಪ, ರಾಯ್ ಡಯಾಸ್, ಹಾಗೂ ಜೋನ್ ರಾಬರ್ಟ್ ಪೊಲೀಸ್ ವಶವಾದ ಆರೋಪಿಗಳು.
ಆರೋಪಿಗಳಿಂದ ರೂ. ೧೧,೨೬೫ ನಗದು ಹಣ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕ ಸ್ಥಳವನ್ನೇ ಅಡ್ಡೆ ಮಾಡಿದ ಜೂಜುಕೋರರು!
ಮಂಗಳೂರಿನಲ್ಲಿ ಹಲವು ಕ್ಲಬ್ಬುಗಳಲ್ಲಿ ಅಕ್ರಮವಾಗಿ ಎಗ್ಗಿಲ್ಲದೆ ಜೂಟಾಟ ನಡೆಯುತ್ತಿತ್ತು. ಆದರೆ ಪೊಲೀಸರು ಒಂದೇ ಸಮನೆ ರೈಡು ಮಾಡಿ ಜೂಜುಕೋರರನ್ನು ಬಂಧಿಸಿ ಜೈಲಿಗಟ್ಟುತ್ತಿದ್ದರಿಂದ ತಲೆ ಬಿಸಿ ಮಾಡಿಕೊಂಡ ಜೂಜುಕೋರರು, ಸಾರ್ವಜನಿಕ ಸ್ಥಳವಾದ ರೈಲ್ವೆ ಟ್ರಾಕ್, ಗುಡ್ಡ, ಪಾರ್ಕ್ ಹಾಗೂ ಕೆಲವೊಂದು ನಿರ್ಜನ ಪ್ರದೇಶಗಳಲ್ಲಿ ಲಕ್ಷಾಂತರ ಹಣವನ್ನು ಪಣಕ್ಕಿಟ್ಟು ಜೂಜಾಟ ನಡೆಸುತ್ತಿದ್ದರು. ಇದರ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು ಅಲ್ಲಿಗೂ ದಾಳಿ ಮಾಡಿ ಜೂಜುಕೋರರನ್ನು ಬಂಧಿಸಿ ಜೈಲಿಗಟ್ಟುವ ಮೂಲಕ ಜೂಜುಕೋರರಿಗೆ ಬಿಸಿ ಮುಟ್ಟಿಸಿದ್ದಾರೆ.
ಸಿಸಿಬಿ ಹಾಗೂ ಮಂಗಳೂರು ಪಣಂಬೂರು ಪೊಲೀಸರ ಕಾರ್ಯಾಚರಣೆ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿ ಅಕ್ರಮ ಜೂಜುಕೋರರ ಹುಟ್ಟಡಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಜೂಜಾಟದಿಂದ ಈಗಾಗಲೇ ಹಲವಾರು ಮಂದಿ ಮನೆ ಮಠ ಕಳೆದುಕೊಂಡಿದ್ದು, ನಗರದಲ್ಲಿ ಜೂಜು ಮಾಫಿಯ ಮತ್ತೆ ತಲೆ ಎತ್ತಲು ಸದ್ದಿಲ್ಲದೆ ಪ್ರಯತ್ನಿಸುತ್ತಿದೆ ಎಂಬ ವರ್ತಮಾನ ಲಭಿಸಿದೆ.