ಬೆಂಗಳೂರು: ಪತ್ನಿಯ ಕತ್ತು ಹಿಸುಕಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಂದ ಪತಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ಯಾಡರಹಳ್ಳಿಯ ಕಾಳಿಕಾನಗರದಲ್ಲಿ ನಡೆದಿದೆ.
ಮಮತಾ(32) ಕೊಲೆಯಾದ ದುರ್ದೈವಿಯಾಗಿದ್ದು, ಆಕೆಯನ್ನು ಕೊಂದು ಬಳಿಕ ಆಕೆಯ ಪತಿ ಸುರೇಶ್ ಸಹ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
ಹದಿನಾಲ್ಕು ವರ್ಷಗಳ ಹಿಂದೆ ಮಮತಾ ಮತ್ತು ಸುರೇಶ್ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಾಳಿಕಾನಗರದಲ್ಲಿ ವಾಸ ಮಾಡುತ್ತಿದ್ದರು. ಪತಿ ಆಟೋ ಚಾಲಕನಾಗಿದ್ದು ಕೆಲ ಸಮಯದಿಂದ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ. ಮಮತಾ ಖಾಸಗಿ ಕಂಪನಿಯೊಂದರಲ್ಲಿ ದುಡಿದು ಮನೆ ನಿರ್ವಹಣೆ ಮಾಡುತ್ತಿದ್ದಳು. ಪತಿ ಪತ್ನಿಯ ನಡುವೆ ಆಗಾಗ್ಗೆ ಜಗಳಗಳಾಗುತ್ತಿದ್ದು ಕ್ಷುಲ್ಲಕ ಕಾರಣಗಳಿಗೆ ಸುರೇಶ್ ಮಮತಾಗೆ ಹಲ್ಲೆ ನಡೆಸುತ್ತಿದ್ದ. ಇವರ ನಡುವೆ ಸಾಕಷ್ಟು ಬಾರಿ ರಾಜಿ ಪಂಚಾಯತಿ ಸಹ ಆಗಿತ್ತು.
ಘಟನೆ ನಡೆದ ಹಿಂದಿನ ರಾತ್ರಿ ಮನೆಯಿಂದ ಹೊರ ಹೋದ ಸುರೇಶ್ ಮರುದಿನ ಬೆಳಗ್ಗೆ ಹಿಂದಿರುಗಿದ್ದಾನೆ. ಈ ಸಮಯ ದಂಪತಿ ನಡುವೆ ಗಲಾಟೆ ನಡೆದಿದ್ದು ಹೆಂಡತಿಯನ್ನು ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಂದಿದ್ದಾನೆ. ಬಳಿಕ ತಾನು ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇವರ ಮನೆಯ ಪಕ್ಕದಲ್ಲೇ ಮಮತಾ ತವರು ಮನೆಯೂ ಇದ್ದು, ಅವರ ತಾಯಿ ರುಕ್ಮಿಣಿ ಅವರಿಗೆ ಮಮತಾ ಸುರೇಶ್ ಪುತ್ರ ಕರೆ ಮಾಡಿ ‘ಅಮ್ಮ ಮಾತನಾಡುತ್ತಿಲ್ಲ, ತಕ್ಷಣವೇ ಬರುವಂತೆ’ ಕರೆ ಮಾಡಿದ್ದ. ರುಕ್ಮಿಣಿ ಬಂದು ನೋಡಿದಾಗ ಮಮತಾ ಮೂಗಿನಿಂದ ರಕ್ತ ಬಂದಿದ್ದು, ಉಸಿರು ನಿಂತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಾಗೆಯೇ ಸುರೇಶ್ ತನ್ನದೇ ಪುತ್ರಿಗೆ ಸಹ ಲೈಂಗಿಕ ಹಿಂಸೆ ನೀಡುತ್ತಿದ್ದ. ಅಶ್ಲೀಲ ವಿಡಿಯೋ ತೋರಿಸಿ ಹಿಂಸೆ ನೀಡುತ್ತಿದ್ದ. ಇದೇ ಕಾರಣಕ್ಕೆ ಪತಿ ಪತ್ನಿ ನಡುವೆ ಜಗಳ ನಡೆದು ಡಿವೋರ್ಸ್ ಹಂತಕ್ಕೂ ತಲುಪಿತ್ತು ಎಂಬುದಾಗಿಯೂ ಮಮತಾ ತಾಯಿ ರುಕ್ಮಿಣಿ ದೂರಿನಲ್ಲಿ ವಿವರಿಸಿದ್ದಾರೆ.