ಕಲ್ಬುರ್ಗಿ: ಪೊಲೀಸ್ ಪೇದೆಯ್ನನು ಹತ್ಯೆ ಮಾಡಿ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಬಂಧಿತ ಆರೋಪಿ ಅಂಬರೀಷ ಯಾನೆ ಅಂಬಾದಾಸ ನಾಟೀಕಾರ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯನ್ನು ಹತ್ಯೆ ಮಾಡಿ ಕಠಿಣ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದ. ಅನಂತರ ಅನಾರೋಗ್ಯದ ನೆಪದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ.
2009 ರಲ್ಲಿ ಸಬ್ ಅರ್ಬನ್ ಪೊಲೀಸ್ ಠಾಣೆಯ ಸಿಬ್ಬಂದಿ ರಾತ್ರಿ ವೇಳೆ ಗಸ್ತು ನಡೆಸುತ್ತಿದ್ದಾಗ ಆರೋಪಿ ಅಂಬರೀಷ ಪೊಲೀಸ್ ಪೇದೆ ಅಶ್ವಿನ್ ಕುಮಾರ್ ಸಿಪಿಸಿ ಅವರ ಗುಪ್ತಾಂಗಕ್ಕೆ ಹಲ್ಲೆ ನಡೆಸಿ ಹತ್ಯೆಗೈದಿದ್ದ. ಈ ವಿಚಾರಕ್ಕೆ ಸಂಬಂಧಿಸಿ ಆರೋಪಿಗೆ ಕಠಿಣ ಶಿಕ್ಷೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸಿ ಕೋರ್ಟ್ ಆದೇಶ ನೀಡಿತ್ತು.
ಈತನನ್ನು ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಅಲ್ಲಿ ಸಹಕೈದಿಗಳ ಜೊತೆ ಗಲಾಟೆ ಮಾಡಿದ ಆರೋಪದಲ್ಲಿ ಈತನನ್ನು ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಆತನಿಗೆ ಅನಾರೋಗ್ಯ ಭಾದಿಸಿದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಆತ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ.
ಈತ ನಾಪತ್ತೆಯಾಗಿ ಹನ್ನೊಂದು ವರ್ಷಗಳಾಗಿದ್ದು, ಸದ್ಯ ಈತನನ್ನು ಮತ್ತೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈತನನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಲಾಗಿದ್ದು, ಮತ್ತೆ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.