ಮಂಗಳೂರು: ಫರಂಗಿಪೇಟೆಯ ಕಿದೆಬೆಟ್ಟು ಪದ್ಮನಾಭ ಮಡಿವಾಳರ ಪುತ್ರ ದಿಗಂತ್ ನಾಪತ್ತೆಯಾಗಿ ಅನೇಕ ದಿನಗಳಾಗಿವೆ. ಪಶ್ಚಿಮ ವಲಯ ಐ.ಜಿ ಅಮೀತ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿ ಯತೀಶ್ ನೇತೃತ್ವದಲ್ಲಿ ಮತ್ತಷ್ಟು ತನಿಖೆ ತೀವ್ರಗೊಳಿಸಲಾಗಿದೆ. ಜಿಲ್ಲೆಯ ವಿವಿಧ ಠಾಣೆಗಳ ಸಬ್ ಇನ್ಸ್ ಪೆಕ್ಟರ್ ಗಳನ್ನು ಮತ್ತು ಜಿಲ್ಲೆಯ ವಿವಿಧ ಠಾಣೆಗಳ ಕ್ರೈಮ್ ವಿಭಾಗದಲ್ಲಿ ಕರ್ತವ್ಯ ಮಾಡುತ್ತಿರುವ ಸಿಬ್ಬಂದಿಗಳನ್ನು ತನಿಖೆಯಲ್ಲಿ ಜೋಡಿಸಿಕೊಂಡಿದ್ದಾರೆ.
ಇನ್ನೂ ಈ ಪ್ರಕರಣದಲ್ಲಿ ಬಾಲಕ ದಿಗಂತ್ ಬಳಸುತ್ತಿದ್ದ ಮೊಬೈಲ್ ನ ಸಿಡಿಆರ್ ಆಧರಿಸಿ ಕೆಲವರ ವಿಚಾರಣೆ ಕೂಡ ನಡೆಸಲಾಗುತ್ತಿದೆ. ದಿಗಂತ್ ಸ್ನೇಹಿತರು, ಸಹಪಾಠಿಗಳ ಜೊತೆಗೆ ನಾಪತ್ತೆಯ ಮೊದಲು ನಡೆಸಿದ ಎಲ್ಲಾ ರೀತಿಯ ಸಂಭಾಷಣೆಗಳ ಕುರಿತು ಕೂಡ ವಿಚಾರಣೆ ನಡೆಸಲಾಗುತ್ತಿದೆ. ಶಂಕೆ ವ್ಯಕ್ತವಾದ ಎಲ್ಲಾ ಆಯಾಮಗಳಲ್ಲಿ ಕೂಡ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪಶ್ಚಿಮ ವಲಯ ಐ.ಜಿ ಅಮೀತ್ ಸಿಂಗ್ ಮತ್ತು ಎಸ್ಪಿ ಯತೀಶ್ ಅವರು ವಿಶೇಷ ಮುತುವರ್ಜಿವಹಿಸಿ ತನಿಖೆಯ ಕ್ಷಣ ಕ್ಷಣದ ಮಾಹಿತಿಯನ್ನು ಕೂಡ ತನಿಖೆಯಲ್ಲಿ ನಿರತವಾಗಿರುವ ಅಧಿಕಾರಿಗಳಿಂದ ಪಡೆಯುತ್ತಿದ್ದು, ದಿಗಂತ್ ನ ಮೊಬೈಲ್ ಅನ್ನು ಕೂಡ ವಿಧಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಕ್ಕೆ ಕಳುಹಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ.
ಇದೀಗ ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಾಹಿತಿಗಳ ಪ್ರಕಾರ ದಿಗಂತ್ ನನ್ನು ರೈಲ್ವೆ ಟ್ರ್ಯಾಕ್ ನಿಂದ ಮಂಗಳಮುಖಿಯರು ಅಪಹರಿಸಿದರೆ? ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಬಿ.ಸಿ ರೋಡಿನಲ್ಲಿ ಯುವಕನೊಬ್ಬ ನಾಪತ್ತೆಯಾಗಿದ್ದ, ಹಲವಾರು ದಿನಗಳ ನಂತರ ಮಂಗಳಮುಖಿಯಾಗಿ ಪತ್ತೆಯಾಗಿದ್ದ. ಆತನನ್ನು ಅಪಹರಿಸಿ ನಂತರ ಮಂಗಳಮುಖಿಯಾಗಿ ಪರಿವರ್ತಿಸಿರುವ ಘಟನೆ ಅಂದು ನಡೆದಿತ್ತು. ಮಾತ್ರವಲ್ಲದೇ ಬಂಟ್ವಾಳ ತಾಲ್ಲೂಕಿನಲ್ಲಿ ಮತ್ತೊಬ್ಬ ಯುವಕನನ್ನು ಕೂಡ ಇದೇ ರೀತಿಯಾಗಿ ಮಂಗಳಮುಖಿಯಾಗಿ ಪರಿವರ್ತನೆ ಮಾಡಿರುವುದು ಕಂಡು ಬಂದಿತ್ತು. ನಂತರ ಸುದ್ದಿಗೋಷ್ಟಿ ಕರೆದು ನನ್ನನ್ನು ಯಾರು ಕೂಡ ಅಪಹರಿಸಿಲ್ಲ ನನ್ನ ಸ್ವಇಚ್ಛೆಯಿಂದ ಹೋಗಿರುವುದು ಎಂದು ಹೇಳಿಕೆ ನೀಡಿದ್ದರು. ಈ ಎಲ್ಲಾ ಹಿನ್ನೆಲೆಯಿಂದ ಈ ರೀತಿಯ ಒಂದು ಅನುಮಾನ ಕೂಡ ವ್ಯಕ್ತವಾಗಿದ್ದು, ಪೊಲೀಸರು ಈಗಾಗಲೇ ಎಲ್ಲಾ ಆಯಾಮಗಳಲ್ಲಿ ಕೂಡ ತನಿಖೆ ಮುಂದುರಿಸಿದ್ದಾರೆ ಎನ್ನಲಾಗಿದೆ.