ಬಂಟ್ವಾಳ: ಸಾಮರ್ಥ್ಯ ಕುಸಿದಿರುವ ಪೊಳಲಿಯ ಹತ್ತಿರದ ಅಡ್ಡೂರು ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಲಾಗಿದ್ದರೂ ರಾತ್ರಿ ವೇಳೆಯಲ್ಲಿ ಲಾರಿಯೊಂದು ಸಂಚಾರ ನಡೆಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಡ್ಡೂರು ಸೇತುವೆಯಲ್ಲಿ ಹಗಲು ವೇಳೆಯಲ್ಲೇ ಬಸ್ಸುಗಳು, ಇತರ ಘನ ವಾಹನಗಳು, ಶಾಲಾ ಬಸ್ಸುಗಳ ಸಂಚಾರಕ್ಕೂ ಅವಕಾಶ ನೀಡಲಾಗಿಲ್ಲ. ಕೇವಲ ಲಘು ವಾಹನಗಳಿಗಷ್ಟೇ ಜಿಲ್ಲಾಡಳಿತ ಈ ಸೇತುವೆಯ ಮೇಲೆ ಸಂಚರಿಸಲು ಅನುಮತಿ ನೀಡಿತ್ತು. ಈ ಹಿಂದೆ ಬಸ್ಸು ಸಂಚಾರಕ್ಕೆ ಅನುಮತಿ ಕೇಳಿ ಹೋರಾಟಗಳು ನಡೆದಿದ್ದರೂ ಜಿಲ್ಲಾಡಳಿತ ಅದಕ್ಕೆ ಅವಕಾಶ ನೀಡಿರಲಿಲ್ಲ.
ಅಲ್ಲದೆ ಸೇತುವೆಯ ಎರಡೂ ಬದಿಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದರೂ ಅದಕ್ಕೆ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಅದನ್ನು ತೆರವು ಮಾಡಲಾಗಿತ್ತು. ಇನ್ನೊಂದು ಬದಿಯಲ್ಲಿ ತಡೆ ಕೂಡಾ ಇಲ್ಲ ಎನ್ನುವ ಮಾಹಿತಿ ಇದೆ. ನಾಮಕಾವಸ್ಥೆಗಷ್ಟೇ ಚೆಕ್‌ಪೋಸ್ಟ್ ನಿರ್ಮಾಣವಾಗಿದ್ದು, ಅದರಿಂದ ಯಾವುದೇ ಉಪಯೋಗ ಇಲ್ಲ ಎಂಬಂತಿತ್ತು.
ಈಗ ಸರಕು ತುಂಬಿದ ಲಾರಿ ಸೇತುವೆ ದಾಟುತ್ತಿರುವ ವಿಡಿಯೋ ವೈರಲ್ ಆಗಿದ್ದು, ಆ ಸೇತುವೆ ಅಡ್ಡೂರು ಸೇತುವೆ ಎಂದೇ ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅಧಿಕಾರಿಗಳು ರಾತ್ರಿ ವೇಳೆಯಲ್ಲಿ ವ್ಯವಹಾರ ಕುದುರಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಹಗಲು ಹೊತ್ತಲ್ಲಿ ಇತರ ವಾಹನಗಳಿಗೂ ಇಲ್ಲಿ ಪ್ರಯಾಣಿಸಲು ಅವಕಾಶ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.