ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಡಿಸಿರುವ ಬಜೆಟ್‌ಗೆ ‘ಜಿನ್ನಾ ಆತ್ಮ ಖುಷಿಪಟ್ಟಿರಬೇಕು’. ಇದು ಕಾಂಗ್ರೆಸ್ ಬಜೆಟ್ಟೋ? ಅಥವಾ ಮುಸ್ಲಿಂ ಲೀಗ್ ಬಜೆಟ್ಟೋ? ಈ ರೀತಿಯ ಬಜೆಟ್ ಮಂಡಿಸಲು ಜಿನ್ನಾ ಆತ್ಮ ಕಾಂಗ್ರೆಸ್‌ಗೆ ಪ್ರಚೋದನೆ ನೀಡಿರಬೇಕು ಎಂದು ಬಿಜೆಪಿ ನಾಯಕ ಸಿಟಿ ರವಿ ವ್ಯಂಗ್ಯ ಮಾಡಿದ್ದಾರೆ.
ಇದು ಸಿದ್ದರಾಮಯ್ಯ ಅವರ ದಾಖಲೆಯ ಹತ್ತನೇ ಬಜೆಟ್. ಈ ಸಂದರ್ಭದಲ್ಲಿ ಜನರಿಗೆ ಗೊತ್ತಿರಬೇಕಾದ ಅವರ ದಾಖಲೆ ಎಂದರೆ ಹೆಚ್ಚು ಸಾಲ ಮಾಡಿದ್ದು. ನಾಲ್ಕು ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದ ಕೀರ್ತಿ ಅವರದ್ದು. ಕಳೆದ ಬಜೆಟ್ಟಿಗಿಂತ ತೆರಿಗೆ ಸಂಗ್ರಹ ಕಮ್ಮಿ ಆಗಲಿದೆ ಎಂದು ಅಂದಾಜು ಮಾಡಿದ್ದಾರೆ. ಬೆಲೆ ಏರಿಕೆಯ ಬಳಿಕವೂ ತೆರಿಗೆ ಕಮ್ಮಿ ಆಗಿದೆ ಎಂದರೆ ಯೋಚಿಸಬೇಕಾದ ವಿಷಯ ಎಂದು ಅವರು ಕಿಡಿ ಕಾರಿದ್ದಾರೆ.
ಸಾಲ ಮಾಡಿ ತುಪ್ಪ ತಿನ್ನುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದ್ದು, ಈ ಬಗ್ಗೆ ನಾವು ಗಂಭೀರವಾಗಿ ಆಲೋಚಿಸಬೇಕಾಗಿದೆ. ನಮ್ಮ ಸಂವಿಧಾನವೇ ಧರ್ಮಾಧಾರಿತ ಮೀಸಲಾತಿಯನ್ನು ಒಪ್ಪುವುದಿಲ್ಲ. ಆದರೆ ಓಟ್‌ಬ್ಯಾಂಕ್‌ಗಾಗಿ ಕಾಂಗ್ರೆಸ್ ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರೇ ನಿಮ್ಮ ಬಜೆಟ್‌ನಲ್ಲಿ ಹಿಂದೂಗಳಿಗೆ ಏನು ನೀಡಿದ್ದೀರಿ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಅನೇಕ ಕೊಡುಗೆಗಳನ್ನು ಕಾಂಗ್ರೆಸ್ ನೀಡಿದೆ. ಆದರೆ ಎಷ್ಟೋ ಊರುಗಳಲ್ಲಿ ಹಿಂದೂಗಳಿಗೆ ಸ್ಮಶಾನವೇ ಇಲ್ಲ. ಹಿಂದೂಗಳಿಗೆ ಏನು ನೀಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಮುಸ್ಲಿಂಮೇತರ ಜನರು, ವಿದ್ಯಾರ್ಥಿಗಳು ಕಾಂಗ್ರೆಸ್ ಗಮನಕ್ಕೆ ಬಂದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಇದೊಂದು ಕಮ್ಯುನಲ್ ಬಜೆಟ್ ಆಗಿದ್ದು, ಮುಸ್ಲಿಂ ಲೀಗ್‌ನ ಪ್ರೇತಾತ್ಮ ಕಾಂಗ್ರೆಸ್ ಅನ್ನು ಆವರಿಸಿದೆ ಎಂದವರು ಹೇಳಿದ್ದಾರೆ.