ಬೆಂಗಳೂರು: ಭ್ರಷ್ಟಾಚಾರ, ಆಡಳಿತದಲ್ಲಿ ಲೋಪ ಮೊದಲಾದ ವಿಷಯಕ್ಕೆ ಸಂಬಂಧಿಸಿದ ಹಾಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಉಪ ನೋಂದಣಾಧಿಕಾರಿಗಳ ಕಚೇರಿಗಳ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್, ಉಪ ಲೋಕಾಯುಕ್ತ ಕೆ. ಎನ್. ಫಣೀಂದ್ರ ಮತ್ತು ಬಿ. ವೀರಪ್ಪ ಅವರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಈ ಹಿಂದೆ 2022 ರಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ದಾಳಿ ನಡೆಸಿದ ಸಂದರ್ಭದಲ್ಲಿ ಸಹ ಸಾಕಷ್ಟು ನ್ಯೂನೇಯತೆಗಳು ಕಂಡು ಬಂದಿದ್ದು, ಈ ಬಾರಿಯೂ ಮತ್ತೆ ಅಂತಹದ್ದೇ ವಿಷಯಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದಾಸನಪುರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಸದ ಬಟ್ಟಿಯಲ್ಲಿ ಬಟ್ಟೆ ಸುತ್ತಿ ಎಸೆಯಲಾಗಿದ್ದ 20 ಸಾವಿರ ರೂ. ನಗದು ಪತ್ತೆಯಾಗಿದೆ. ಜೊತೆಗೆ ಅಲ್ಲಿನ ಗುಮಾಸ್ತನ ಫೋನ್ ಪೇ ಅಕೌಂಟ್‌ಗೆ ಪ್ರತಿನಿತ್ಯ ಹಣ ಸಂದಾಯವಾಗಿರುವ ವಿಚಾರವೂ ಬೆಳಕಿಗೆ ಬಂದಿದೆ. ಈ ಹಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಸಹ ಕಚೇರಿಯಲ್ಲಿ ಪತ್ತೆಯಾಗಿಲ್ಲ.
ವಿಜಯನಗರದಲ್ಲಿ ಇ.ಸಿ. ನೀಡಲು ಹಣವನ್ನು ಪತಿಯ ಫೋನ್ ಪೇಗೆ ಕಳಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ. ಹಾಗೆಯೇ ಪ್ಯಾನ್ ಕಾರ್ಡ್ ನಮೂದಿಸದೆ ಹೆಚ್ಚಿನ ಮೊತ್ತದ ನೋಂದಣಿ ದಾಖಲೆಗಳನ್ನು ರಿಜಿಸ್ಟರ್ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಹಾಗೆಯೇ ಜೆ.ಪಿ. ನಗರದ ಸಬ್ ರಿಜಿಸ್ಟ್ರಾರ್ ಕಾರಿನಲ್ಲಿ ಮೈಕಲ್ ಕೋರಿಸ್ ವಾಚ್ ಪತ್ತೆಯಾಗಿದ್ದು, ಇದರ ಸುತ್ತ ಅನುಮಾನದ ಹುತ್ತ ಎದ್ದಿದೆ.