ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆಕೆಯ ಗೆಳೆಯ, ದುಬೈನಲ್ಲಿ ಆಕೆಯ ಜೊತೆಗಿದ್ದ ಸ್ಟಾರ್ ಹೊಟೇಲ್ ಮಾಲೀಕನ ಮೊಮ್ಮಗನನ್ನು ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಆತನನ್ನು ವಶಕ್ಕೆ ಪಡೆಯಲಾಗಿದೆ. ಕಳೆದೆರಡು ದಿನದಿಂದ ರನ್ಯಾ ಸ್ನೇಹಿತ ತರುಣ್ ರಾಜ್ ಎಂಬಾತನನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು.
ರನ್ಯಾ ಮತ್ತು ತರುಣ್ ಸ್ನೇಹಿತರಾಗಿದ್ದು, ಆಕೆಯಿಂದ ಆತ ಚಿನ್ನ ತರಿಸಿಕೊಳ್ಳುತ್ತಿದ್ದ ಎಂದು ಮಾಹಿತಿ ಸಿಕ್ಕಿದೆ.
ರನ್ಯಾ ಮೊಬೈಲ್‌ನಲ್ಲಿ ರಾಜಕೀಯ ನಾಯಕರ ಮೊಬೈಲ್ ಸಂಖ್ಯೆಗಳಿದ್ದು, ಅವರ ಕಾಂಟಾಕ್ಟ್ ಲಿಸ್ಟ್ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ. ಹಾಲಿ, ಮಾಜಿ ಸಚಿವರುಗಳ ನಂಬರ್ ಸಹ ಇತ್ತು, ಕೆಲವು ಪೊಲೀಸ್ ಅಧಿಕಾರಿಗಳ ಮೊಬೈಲ್ ಸಂಖ್ಯೆ ಸಹ ಅದರಲ್ಲಿತ್ತು ಎನ್ನಲಾಗಿದೆ.
ಇನ್ನು ಕಳೆದ ಮೂರು ದಿನಗಳಿಂದ ಡಿಆರ್‌ಐ ಕಸ್ಟಡಿಯಲ್ಲಿದ್ದ ರನ್ಯಾ, ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.