ಬೆಂಗಳೂರು: ಸಾಮಾಜಿಕ ಜಾಲತಾಣ ವೇದಿಕೆಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇರಿಸಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾ ಉಪಯೋಗ, ದುರುಪಯೋಗಕ್ಕೆ ಸಂಬಂಧಿಸಿದ ಹಾಗೆ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಉತ್ತರಿಸಿದ ಅವರು, ತಂತ್ರಜ್ಞಾನದ ಹೊರತಾಗಿ ಬದುಕು ಸಾಧಿಸುವುದು ಈಗ ಸುಲಭವಲ್ಲ. ಆದರೆ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಕೆಲಸ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲೇ ಮೊದಲು ಎಂಬಂತೆ ‘ಸೋಶಿಯಲ್ ಮೀಡಿಯಾ ಮಾನಿಟರಿಂಗ್’ ಎಂಬ ವಿಭಾಗವನ್ನು ನಾವು ಆರಂಭಿಸಿದ್ದೇವೆ. ಪ್ರತಿ ಠಾಣೆಯಲ್ಲೂ ಈ ಸಂಬಂಧ ಸೆಲ್ ತೆೆರೆಯಲಾಗಿದೆ. ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳನ್ನು ಮಾನಿಟರ್ ಮಾಡುತ್ತಿದ್ದು, ಸುಳ್ಳು ಸುದ್ದಿ ಕಂಡು ಬಂದ ಕೂಡಲೇ ಸುಮೋಟೋ ಕೇಸ್ ದಾಖಲು ಮಾಡಲಾಗುತ್ತಿದೆ ಎಂದವರು ಮಾಹಿತಿ ನೀಡಿದ್ದಾರೆ.
ಹಾಗೆಯೇ ನ ನಾವು ಫ್ಯಾಕ್ಟ್ ಚೆಕ್ ಮಾಡುವ ಆ್ಯಪ್ ಮಾಡಿದ್ದೇವೆ. ನಿತ್ಯವೂ ಮಾನಿಟರಿಂಗ್ ಕಾರ್ಯವನ್ನು ಸಹ ಪೊಲೀಸ್ ಇಲಾಖೆ ಮಾಡುತ್ತಿದೆ. ಸುಳ್ಳು ಸುದ್ದಿ ಹಬ್ಬುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ರಾಜ್ಯದ ಪ್ರತಿಯೊಂದು ಠಾಣೆಗಳಲ್ಲಿ ಮೀಡಿಯಾ ಡೆಸ್ಕ್, ಲಾ ಆ್ಯಂಡ್ ಆರ್ಡರ್ ಡೆಸ್ಕ್, ವೈಯಕ್ತಿಕ ಡೆಸ್ಕ್, ಸಂಘಟನೆಗೆ ಡೆಸ್ಕ್ ವ್ಯವಸ್ಥೆ ಮಾಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.