ಬಾಗಲಕೋಟೆ: ಸ್ವಾಮೀಜಿಯೊಬ್ಬರ ಕಾಲಿಗೆ ಬಿದ್ದು, ಹಣ ಪಡೆದ ಪೊಲೀಸರು ಸದ್ಯ ವರ್ಗಾವಣೆಯ ಶಿಕ್ಷೆಗೆ ಗುರಿಯಾಗಿದ್ದಾರೆ.
ಕರ್ತವ್ಯನಿರತ ಪೊಲೀಸರು ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ ಅವರ ಕಾಲಿಗೆ ಬಿದ್ದು ಆಶೀರ್ವಾದದ ಜೊತೆಗೆ ಹಣ ಪಡೆದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಪೋಲೀಸರಿಗೆ ಲಂಚ ನೀಡುತ್ತಿದ್ದಾರೆ, ಕರ್ತವ್ಯ ನಿರತ ಪೊಲೀಸರು ಯೂನಿಫಾರಂ ಹಾಕಿರುವಾಗಲೇ ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ? ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿದ್ದವು.
ಇದಕ್ಕೆ ಸ್ವಾಮೀಜಿ ಸ್ಪಷ್ಟನೆ ನೀಡಿದ್ದು, ನಾವೇನೂ ಲಂಚ ಕೊಟ್ಟಿದ್ದಲ್ಲ. ಆಶೀರ್ವಾದ ಪಡೆದವರಿಗೆ ಹಣ ನೀಡುವ ಪರಂಪರೆ ಮಠದ್ದು. ಅದರಂತೆ ಆಶೀರ್ವಾದ ಪಡೆದ ಪೊಲೀಸರಿಗೆ ಹಣ ನೀಡಿದ್ದೇನೆ ಅಷ್ಟೇ. ನಾನು ಸಿದ್ದರಾಮಯ್ಯ ಅವರಿಗೂ ಹಣ ನೀಡಿದ್ದೇನೆ, ಯಡಿಯೂರಪ್ಪ ಅವರಿಗೂ ಹಣ ನೀಡಿದ್ದೇನೆ. ಮಠದ ದಾಸೋಹಕ್ಕ, ಬೇಕಾದಷ್ಟು ಹಣವನ್ನು ಇರಿಸಿಕೊಂಡು ಉಳಿದದ್ದನ್ನು ದಾನ ಮಾಡುವ ಪರಂಪರೆ ನಮ್ಮದು. ಈ ವಿಡಿಯೋ ವೈರಲ್ ಮಾಡುವ ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸ ಮಾಡಬಾರದು ಎಂದು ಅವರು ಹೇಳಿದ್ದಾರೆ.