ಬೆಂಗಳೂರು: ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಹಾಗೆ ಕರ್ನಾಟಕದ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ, ಸಿಬ್ಬಂದಿಗೂ ತರಬೇತಿ ನೀಡಲಿರುವುದಾಗಿ ಕರ್ನಾಟಕ ಸರ್ಕಾರದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಯಾವುದೇ ಇತಿ ಮಿತಿ ಇಲ್ಲದೆ ಸೈಬರ್ ಅಪರಾಧಗಳು ಜಗತ್ತಿನಲ್ಲಿ ನಡೆಯುತ್ತಿದೆ. ಈ ಬಗ್ಗೆ ಅರಿವು, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೆಂಟರ್ ಫಾರ್ ಸೈಬರ್ ಕ್ರೈಮ್ ಇನ್ವೆಸ್ಟಿಗೇಶನ್ ಟ್ರೈನಿಂಗ್ ಆ್ಯಂಡ್ ರಿಸರ್ಚ್ ಅನ್ನು ಸ್ಥಾಪಿಸಲಾಗಿದೆ. ಈ ಸಂಬಂಧ ಸುಮಾರು 46,000 ಕ್ಕೂ ಅಧಿಕ ಪೊಲೀಸರಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶೇ. 30 ರಷ್ಟು ಸೈಬರ್ ಅಪರಾಧಗಳು ದಾಖಲಾಗುತ್ತಿವೆ. ಇದು ಇನ್ನೂ ಹೆಚ್ಚುವ ಸಾಧ್ಯತೆ ಇದ್ದು ಅದನ್ನು ಆರಂಭದಲ್ಲಿಯೇ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.