ಮಂಗಳೂರು: ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷಗಳ ಕಠಿಣ ಸಜೆ ವಿಧಿಸಿ ನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಆರೋಪಿ ರವಿ(35) ಎಂಬವನಿಗೆ 20 ವರ್ಷಗಳ ಕಠಿಣ ಸಜೆ ಮತ್ತು 50,000 ರೂ. ದಂಡದ ಶಿಕ್ಷೆ ವಿಧಿಸಿ ತೀರ್ಪಿತ್ತಿರುವುದಾಗಿದೆ. ದಂಡ ತರಲು ವಿಫಲವಾದಲ್ಲಿ 4 ತಿಂಗಳ ಸಾದಾ ಸಜೆ ವಿಧಿಸಿ ಆದೇಶ ಹೊರಡಿಸಿದೆ. ದಂಡದ ಮೊತ್ತ ಮತ್ತು ಕಾನೂನು ಸೇವಾ ಪ್ರಾಧಿಕಾರದಿಂದ ಆರೂವರೆ ಲಕ್ಷ ರೂ.ಗಳನ್ನು ಸಂತ್ರಸ್ತೆಗೆ ನೀಡುವಂತೆ ಕೋರ್ಟ್ ಆದೇಶಿಸಿದೆ. ಈತ ತನ್ನ ಗೆಳೆಯನ 17 ವರ್ಷದ ಪುತ್ರಿಯ ಮೇಲೆ ಅತ್ಯಾಚಾರ ನಡೆಸಿದ್ದ. ಈತ ಕಾರ್ಕಳದ ಇನ್ನಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಸಂದರ್ಭದಲ್ಲಿ, ಗೆಳೆಯನ ಪುತ್ರಿ ಪಿಯುಸಿ ವಿದ್ಯಾಭ್ಯಾಸಕ್ಕೆಂದು ಬಂದು ಈತನ ಮನೆಯಲ್ಲಿ ಉಳಿದುಕೊಂಡಿದ್ದಳು. ಆಕೆಯನ್ನು ಗುಡ್ಡವೊಂದಕ್ಕೆೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಅನಂತರ ಆತ ಏಳಿಂಜೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದು, ಅಲ್ಲಿಯೂ ಆತ ಇದೇ ಕೃತ್ಯವನ್ನು ಮುಂದುವರೆಸಿದ್ದ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದಳು. ಈ ಸಂಬಂಧ ಆರೋಪಿಯ ವಿರುದ್ಧ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.