ಮಡಿಕೇರಿ: ಜನ ವಾಸ್ತವ್ಯವಿಲ್ಲದ ಮನೆಯೊಂದರಲ್ಲಿ ನವಜಾತ ಹೆಣ್ಣು ಶಿಶುವನ್ನು ಯಾರೋ ತ್ಯಜಿಸಿ ಹೋದ ಘಟನೆ ಬಲ್ಲಮಾವಟಿಯಲ್ಲಿ ನಡೆದಿದೆ. ಪೇರೂರು ಗ್ರಾಮದ ತೋಳಂಡ ಪೂಣಚ್ಚ ಎಂಬವರಿಗೆ ಸೇರಿದ ಲೈನ್ ಮನೆಯಲ್ಲಿ ಶನಿವಾರ ರಾತ್ರಿ ಆಗ ತಾನೆ ಜನಿಸಿದ ಹೆಣ್ಣು ಶಿಶು ಪತ್ತೆಯಾಗಿದೆ. ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಯಾರೋ ಬಿಟ್ಟು ಹೋಗಿದ್ದು, ಇರುವೆಗಳು ಮಗುವನ್ನು ಮುತ್ತಿದ್ದವು ಎಂದು ತಿಳಿದು ಬಂದಿದೆ. ಮಗುವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮಗುವನ್ನು ಚಿಕಿತ್ಸೆಗಾಗಿ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಅಲ್ಲಿಂದ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಮಗುವನ್ನು ದಾಖಲು ಮಾಡಲಾಗಿದೆ. ಮಗುವಿನ ಪೋಷಕರು, ಮಗುವನ್ನು ಅಲ್ಲಿ ಬಿಟ್ಟು ಹೋದ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.