ಕಲ್ಬುರ್ಗಿ: ರಸ್ತೆಯಲ್ಲಿ ಭೀಕರವಾಗಿ ಕೊಲೆ ಮಾಡುವಂತೆ ರೀಲ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿದ್ದು, ಇದರ ಸತ್ಯಾಸತ್ಯತೆಯನ್ನು ಅನ್ವೇಷಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಹುಮನಾಬಾದ್ ರಿಂಗ್ ರೋಡ್ ನಲ್ಲಿ ರಾತ್ರಿ ವೇಳೆ ಇಬ್ಬರು ಅತ್ಯಂತ ಭೀಕರವಾಗಿ ಕೊಲೆ ಮಾಡುವಂತೆ ದೃಶ್ಯಗಳನ್ನು ಸೆರೆ ಹಿಡಿದು ರೀಲ್ಸ್ ಮಾಡಿದ್ದರು. ಇದಕ್ಕಾಗಿ ಆಟೋ, ಇತರ ವಾಹನಗಳ ಲೈಟ್‌ಗಳನ್ನು ಸಹ ಬಳಕೆ ಮಾಡಲಾಗಿತ್ತು. ನಡು ರಾತ್ರಿಯಲ್ಲಿ ವ್ಯಕ್ತಿಯೊಬ್ಬ ಇನ್ನೊಬ್ಬನ ಎದೆಯ ಮೇಲೆ ಕುಳಿತುಕೊಂಡು ಸುತ್ತಿಗೆಯಿಂದ ಕೊಲೆ ಮಾಡಿ, ರಕ್ತಸಿಕ್ತ ದೇಹದ ಮೇಲೆ ಕುಳಿತು ಗಹಗಹಿಸಿ ನಗುವಂತೆ ಈ ರೀಲ್ಸ್ ಮಾಡಲಾಗಿತ್ತು.
ಮೆಂಟಲ್ ಮಜನು ಎನ್ನುವ ಶಾರ್ಟ್ ಮೂವಿಗಾಗಿ ಸಚಿನ್ ಮತ್ತು ಸಾರ ಬಣ್ಣ ಎನ್ನುವವರು ರಸ್ತೆಯ ನಡುವಿನಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ರಕ್ತದ ಮಾದರಿಯ ಕೆಂಪು ಬಣ್ಣವನ್ನು ಮೈಗೆ ಹಚ್ಚಿ ಕೊಂಡು, ಅರೆಬೆತ್ತಲಾಗಿ ಈ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವಿಡಿಯೋ ಎಲ್ಲರ ಮೊಬೈಲ್‌ನಲ್ಲಿ ರಾತ್ರಿಯಿಂದಲೇ ಹರಿದಾಡುತ್ತಿತ್ತು. ಇದನ್ನು ಸತ್ಯ ಘಟನೆ ಎಂದೇ ಎಲ್ಲರೂ ಭಾವಿಸಿದ್ದರು. ತಕ್ಷಣವೇ ಎಚೇಚೆತ್ತುಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.