ಕಾರ್ಕಳ: ಸಾಲದ ಶೂಲಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬರು ತನ್ನಲ್ಲಿದ್ದ 70 ಸಾವಿರ ಹಣವನ್ನು ದುಷ್ಕರ್ಮಿಗಳು ಖಾರದ ಪುಡಿ ಎರಚಿ ದೋಚಿದ್ದಾರೆ ಎಂದು ಸುಳ್ಳು ಹೇಳಿರುವ ಘಟನೆ ಬೋಳ ಗ್ರಾಮದ ಅರಂಬಾಡಿಯಲ್ಲಿ ನಡೆದಿದೆ.
ಕಡಂದಲೆ ನಿವಾಸಿ ವಿಶ್ವನಾಥ್ ಎನ್ನುವವರೇ ಸುಳ್ಳು ಕಥೆ ಕಟ್ಟಿದ ವ್ಯಕ್ತಿ. ವೃತ್ತಿಯಲ್ಲಿ ಮರದ ಕೆಲಸ ಮಾಡುವ ಇವರು ಅರಂಬಾಡಿಯ ರಸ್ತೆ ಬದಿಯಲ್ಲಿ ಬಿದ್ದಿದ್ದರು. ಅದನ್ನು ಕಂಡ ವ್ಯಕ್ತಿಯೊಬ್ಬರು ಅವರಲ್ಲಿ ಏನಾಯಿತು ಎಂದು ವಿಚಾರಣೆ ಮಾಡಿದಾಗ ‘ಖಾರದ ಪುಡಿ’ ಕಟ್ಟುಕತೆಯನ್ನು ಹೇಳಿದ್ದಾರೆ.
ಈ ಬಗ್ಗೆ ಪೊಲೀಸರಿಗೂ ಮಾಹಿತಿ ಸಿಕ್ಕಿದ್ದು, ಅವರು ಈ ಪ್ರದೇಶದಲ್ಲಿ ಬರುವ ಎಲ್ಲಾ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದಾರೆ. ಆದರೆ ವಿಶ್ವನಾಥ್ ಹೇಳಿದ ಯಾವುದೇ ಅಂಶಗಳು ಮತ್ತು ಅದಕ್ಕೆ ಪೂರಕವೆನಿಸುವ ಅಂಶಗಳು ಪತ್ತೆಯಾಗಿಲ್ಲ.
ಈ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಿದ ಪೊಲೀಸರಿಗೆ ವಿಶ್ವನಾಥ ಅವರೇ ಮೆಣಸಿನ ಹುಡಿ ಖರೀದಿ ಮಾಡಿರುವುದು ಗಮನಕ್ಕೆ ಬಂದಿದೆ. ಆ ಮೆಣಸಿನ ಪುಡಿಯನ್ನು ಅವರ ಮೈಗೆ ಅವರೇ ಎರಚಿಕೊಂಡು, ಬಟ್ಟೆ ಹರಿದುಕೊಂಡು ಬೈಕ್ ಸಮೇತ ರಸ್ತೆಗೆ ಬಿದ್ದ ನಾಟಕವಾಡುತ್ತಿದ್ದರು.
ಈ ಬಗ್ಗೆ ವಿಶ್ವನಾಥ್ ಅವರನ್ನೇ ಪೊಲೀಸರು ವಿಚಾರಣೆ ಮಾಡಿದಾಗ ಅವರು ಸತ್ಯ ಒಪ್ಪಿಕೊಂಡಿದ್ದು, ಸಾಲದ ಸುಳಿಗೆ ಸಿಲುಕಿದ ಕಾರಣ ಇಂತಹ ನಾಟಕ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿ ವಿಶ್ವನಾಥ್ ಅವರಿಗೆ ಪೊಲೀಸರು ಎಚ್ಚರಿಕೆ ನೀಡಿ ಬಿಟ್ಟಿದ್ದು, ಈ ಸಂಬಂಧ ಯಾವುದೇ ರೀತಿಯ ಪ್ರಕರಣ ದಾಖಲಾಗಿಲ್ಲ.