ವಿಟ್ಲ: ವಿಟ್ಲ - ಮುಡಿಪು ನಡುವೆ ಅಪಾಯಕ್ಕೆ ಆಹ್ವಾನ ನೀಡುವಂತಹ ಟಯರ್‌ನಲ್ಲಿ ಕಳೆದೆರಡು ದಿನಗಳಿಂದ ಸಂಚರಿಸುತ್ತಿದ್ದ ಖಾಸಗಿ ಬಸ್ಸನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಸಾರಾ ಎಂಬ ಖಾಸಗಿ ಬಸ್ಸು ಹಿಂದಿನ ಬದಿಯಲ್ಲಿ ಒಂದೇ ಚಕ್ರದ ಮೂಲಕ ಓಡಾಟ ನಡೆಸುತ್ತಿತ್ತು. ಇನ್ನೊಂದು ಚಕ್ರ ಒಡೆದು ವಿಚಿತ್ರ ಶಬ್ಧ ಬರುತ್ತಿತ್ತು. ಆದರೂ ಅದನ್ನು ಕಂಡರೂ ಕಾಣದಂತೆ ಡ್ರೈವರ್, ಕಂಡಕ್ಟರ್ ವರ್ತಿಸಿ ಬಸ್ಸನ್ನು ಚಲಾಯಿಸುತ್ತಿದ್ದರು. ಎರಡು ದಿನಗಳಿಂದ ಇದನ್ನು ಗಮನಿಸುತ್ತಿದ್ದ ಸಾರ್ವಜನಿಕರು ಕೊನೆಗೆ ಈ ಬಸ್ ಓಡಾಟ ತಡೆದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಜನರ ಜೀವದ ಜೊತೆ ಬಸ್ಸು ಸಿಬ್ಬಂದಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಪ್ರಯಾಣಿಕರು ಸಹ ರೊಚ್ಚಿಗೆದ್ದಿದ್ದು, ಸಾಲೆತ್ತೂರು ಪೇಟೆಯಲ್ಲಿ ಬಸ್ಸನ್ನು ತಡೆದು ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಹಾಗೆಯೇ ಸಂಬಂಧಿತ ಸಾರಿಗೆ ಅಧಿಕಾರಿಗಳಿಗೂ ದೂರು ನೀಡಿದ್ದಾರೆ.