ಮೂಡಬಿದ್ರೆ: ಅಕ್ರಮ ದನ ಸಾಗಾಟ ನಡೆಸುತ್ತಿರುವ ಆರೋಪದಲ್ಲಿ ಮಾರಣಾಂತಿಕವಾಗಿ ಇಬ್ಬರ ಮೇಲೆ ಹಲ್ಲೆ ನಡೆಸಿ, ವಾಹನವನ್ನು ಪುಡಿಗಟ್ಟಿದ ಇಬ್ಬರು ಭಜರಂಗದಳದ ಕಾರ್ಯಕರ್ತರನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಡಂದಲೆಯ ಸುಧೀರ್ ಶೆಟ್ಟಿ ಮತ್ತು ಸುರತ್ಕಲ್‌ನ ಧನರಾಜ್ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕೃತಕ ಗರ್ಭಧಾರಣೆಗಾಗಿ ಕೂಸಪ್ಪ ಪೂಜಾರಿ ಎಂಬವರು ತಮ್ಮ ಮನೆಯ ಹಸುವನ್ನು ಅಬ್ದುಲ್ ರೆಹ್ಮಾನ್ ಎಂಬವರ ವಾಹನದಲ್ಲಿ ಮೂಡಬಿದ್ರೆಗೆ ಸಾಗಿಸುವಾಗ ಭಜರಂಗದಳದ ಸದಸ್ಯರು ಅಕ್ರಮ ದನ ಸಾಗಾಟ ನಡೆಯುತ್ತಿದೆ ಎಂದು ತಿಳಿದು ಕೂಸಪ್ಪ ಮತ್ತು ರೆಹ್ಮಾನ್ ಮೇಲೆ ಹಲ್ಲೆ ನಡೆಸಿದ್ದರು. ಇಬ್ಬರೂ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಕೂಸಪ್ಪ ಅವರು ನೀಡಿರುವ ದೂರಿನನ್ವಯ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಉಳಿದ ಐವರಿಗಾಗಿ ಶೋಧ ನಡೆಸುತ್ತಿದ್ದಾರೆ.