ತುಮಕೂರು: ಎಂಎಲ್‌ಸಿ ರಾಜೇಂದ್ರ ಹತ್ಯೆಗೆಸಂಚು ಮಾಡಿದ್ದ ಆಡಿಯೋ ಒಂದು ಬಹಿರಂಗವಾಗಿದ್ದು, ಅದರಲ್ಲಿ ಭಾಗಿಯಾದ ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಚುರುಕುಗೊಳಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ರಾಜೇಂದ್ರ ಅವರು ಪೆನ್‌ಡ್ರೈವ್‌ನಲ್ಲಿದ್ದ 18 ನಿಮಿಷಗಳ ಆಡಿಯೋದ ಆಧಾರದಲ್ಲಿ ಪೊಲೀಸ್ ವರಿಷ್ಠರಿಗೆ ದೂರು ನೀಡಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ರಾಜೇಂದ್ರ ಬೆಂಬಲಿಗ ಎನ್ನಲಾದ ರಾಕಿ, ಸೋಮ ಮತ್ತು ಪುಷ್ಪಾ ನಡುವೆ ನಡೆದ ಸಂಭಾಷಣೆಯಲ್ಲಿ ಈ ಸಂಚು ಬಯಲಾಗಿದೆ. ಪ್ರಕರಣದ A1 ಆರೋಪಿ ಸೋಮ ರಾಜೇಂದ್ರ ಹತ್ಯೆಗೆ ರೂಪಿಸಲಾದ ಸಂಚಿನ ಮಾಹಿತಿಯನ್ನು ಪುಷ್ಪಾ ಇಂಚಿಂಚಾಗಿ ಬಿಚ್ಚಿಟ್ಟಿರುವುದು ಈ ಆಡಿಯೋದಲ್ಲಿ ದಾಖಲಾಗಿದೆ.
ರಾಜೇಂದ್ರ ಅವರ ಹತ್ಯೆಗೆ ಸೋಮ ಸುಪಾರಿ ಪಡೆದಿದ್ದಾಗಿ ಹೇಳಿಕೊಂಡಿದ್ದಾನೆ. ಆ ಬಳಿಕ ಪುಷ್ಪ ಈ ಆಡಿಯೋವನ್ನು ರೆಕಾರ್ಡ್ ಮಾಡಿ ರಾಕಿ ಮೂಲಕ ರಾಜೇಂದ್ರ ಅವರಿಗೆ ತಲುಪಿಸಿದ್ದಳು. ಅದನ್ನಾಧರಿಸಿ ರಾಜೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಗಳಾದ ಸೋಮ, ಭರತ್, ಅಮಿತ್, ಗುಂಡ, ಯತೀಶ್ ವಿರುದ್ಧ ಕೇಸು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪುಷ್ಪಾಳನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.