ಬೀದರ್: ಜನವಾಡ ರಸ್ತೆಯಲ್ಲಿನ ನ್ಯಾಯಾಂಗ ವಸತಿ ಗೃಹದಲ್ಲಿರುವ 2 ನೇ ಹೆಚ್ಚುವರಿ ಸಿವಿಲ್ ಮತ್ತು 2 ನೇ ಹೆಚ್ಚುವರಿ ಜೆಎಂಎಫ್‌ಸಿ ಕೋರ್ಟ್‌ನ ನ್ಯಾಯಾಧೀಶ ಎಂ.ಡಿ. ಶಾಯಿಜ್ ಚೌಟಾಯಿ ಅವರ ಮನೆಗೆ ನುಗ್ಗಿದ ಕಳ್ಳರು ಸುಮಾರು 8 ಲಕ್ಷ ರೂ. ಗಳ ಚಿನ್ನಾಭರಣಗಳನ್ನು ದೋಚಿದ ಘಟನೆ ನಡೆದಿದೆ.
ನ್ಯಾಯಾಧೀಶರು ತಮ್ಮ ಕುಟುಂಬ ಸಮೇತ ರಂಜಾನ್ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ತೆರಳಿದ್ದರು. ಮನೆಯಲ್ಲಿನ ಗಿಡಗಳಿಗೆ ನೀರು ಹಾಯಿಸಲು ಕೆಲಸದಾತ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ತಡರಾತ್ರಿ ಮನೆಗೆ ಬಂದು ಪರಿಶೀಲನೆ ಮಾಡಿದಾಗ ಕಳ್ಳತನ ಪ್ರಕರಣ ಬಯಲಾಗಿದೆ.
ಮನೆಯ ಸುತ್ತಮುತ್ತಲು ಅಳವಡಿಸಲಾದ ಸಿಸಿಟಿವಿ ದೃಶ್ಯಗಳಲ್ಲಿ ನಾಲ್ವರು ಕಳ್ಳರು ಹಿಂಬಾಗಿಲಿನಿಂದ ಬಂದು, ಬಾಗಿಲಿನ ಬೀಗ ಮುರಿದು ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿರುವುದು ತಿಳಿದು ಬಂದಿದೆ.
ಈ ಸಂಬಂಧ ನೂತನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.