ಬೆಂಗಳೂರು: ನಮ್ಮ ಸಂಬಂಧ ಬರೀ ಅನುಮಾನಗಳಿಂದಲೇ ತುಂಬಿತ್ತು. ವಿವಾಹವಾದಾಗಿಂದ ನಮ್ಮ ನಡುವೆ ಸರಿಯಾಗಿ ಮಾತುಕತೆಯೇ ಇಲ್ಲ. ಆಕೆ ಪದೇ ಪದೇ ದುಬೈಗೆ ಹೋಗುತ್ತಿದ್ದಳು ಎಂದು ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿ ರನ್ಯಾ ರಾವ್ ಪತಿ ತಿಳಿಸಿದ್ದಾರೆ.
ಜತಿನ್ ಅವರು ರನ್ಯಾ ಜೊತೆಗಿನ ತಮ್ಮ ಸಂಬಂಧಕ್ಕೆ ಮುಕ್ತಾಯ ಹಾಡಲು ಬಯಸಿದ್ದು, ಈ ಹಿನ್ನೆಲೆಯಲ್ಲಿ ಫ್ಯಾಮಿಲಿ ಕೋರ್ಟ್‌ಗೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ.
ಮದುವೆಯಾದ ಒಂದೇ ತಿಂಗಳಿಗೆ ಜತಿನ್, ರನ್ಯಾ ನಡುವೆ ಮನಸ್ತಾಪ ಶುರುವಾಗಿದ್ದು ಸಂಬಂಧದಲ್ಲಿ ಪಾರದರ್ಶಕತೆಯೂ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಮದುವೆಯಾದ ಎರಡೇ ತಿಂಗಳಿಗೆ ರನ್ಯಾ ದುಬೈ ಹೋಗಲು ಆರಂಭಿಸಿದ್ದಾರೆ. ಪದೇ ಪದೇ ದುಬೈಗೆ ಟ್ರಿಪ್ ಹೋಗುತ್ತಿದ್ದ ರನ್ಯಾ ಮೇಲೆ ಅನುಮಾನ ಬಂದು ಪತಿ ಪತ್ನಿ ನಡುವೆ ಜಗಳ ಏರ್ಪಟ್ಟಿತ್ತು ಎಂದು ಜತಿನ್ ವಿಚ್ಛೇದನಕ್ಕಾಗಿ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.