ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಎಂಬ ಯುವತಿಯ ಅತ್ಯಾಚಾರ, ಹತ್ಯೆಯನ್ನು ಖಂಡಿಸಿ ಎ.6 ರಂದು ಧರ್ಮಸ್ಥಳದಲ್ಲಿ ನಡೆಯಬೇಕಾಗಿದ್ದ ಪ್ರತಿಭಟನೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಪ್ರತಿಭಟನೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿರುವುದಾಗಿದೆ. ಅರ್ಜಿದಾರರ ಪರ ವಕೀಲರು ಪ್ರತಿಭಟನೆಗೆ ಸಂಬಂಧಿಸಿದ ಹಾಗೆ ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದ ಸಂದೇಶಗಳನ್ನು ಸಹ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಈ ಸಂದೇಶಗಳು ಧರ್ಮಸ್ಥಳ ದೇವಾಲಯ ಮತ್ತು ಧರ್ಮಾಧಿಕಾರಿಗಳ ಪರವಾಗಿ ಈ ಹಿಂದೆ ನ್ಯಾಯಾಲಯ ಹೊರಡಿಸಿದ್ದ ಆದೇಶಗಳನ್ನು ಉಲ್ಲಂಘನೆ ಮಾಡುವ ಸಾಧ್ಯತೆ ಇರುವುದಾಗಿಯೂ ಅವರು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಜೊತೆಗೆ ದೇಗುಲದ ಒಳಕ್ಕೆ ಬಲವಂತವಾಗಿ ಪ್ರವೇಶಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವ ಹಾಗಿಲ್ಲ ಎಂದು ತಿಳಿಸಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡಿರುವ ಕೋರ್ಟ್ ಪ್ರತಿಭಟನೆಗೆ ತಡೆ ನೀಡಿದ್ದು, ಇದನ್ನು ಆಯೋಜನೆ ಮಾಡಿದವರಿಗೂ ನೊಟೀಸ್ ಜಾರಿ ಮಾಡಿದೆ. ಈ ಸಂಬಂಧ ವಿಚಾರಣೆಯನ್ನು ಮುಂದೂಡಿದೆ.