ಹುಣಸೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ, ಮದುವೆಯಾಗಿದ್ದ ಪತಿಯೊಬ್ಬ ಪತ್ನಿಯನ್ನು ಕೊಂದು, ಪೊಲೀಸರಿಗೆ ಶರಣಾದ ಘಟನೆ ಬೂಚಳ್ಳಿಯಲ್ಲಿ ನಡೆದಿದೆ. ತುಮಕೂರು ಮೂಲದ ಪವಿತ್ರ ಎಂಬಾಕೆಯೇ ಮೃತ ದುರ್ದೈವಿ. ಆಕೆಯ ಪತಿ ಸಚಿನ್ ಎಂಬಾತನೇ ಆಕೆಯ ನಡವಳಿಕೆಯಿಂದ ಬೇಸತ್ತು ಕೊಲೆ ಮಾಡಿರುವ ಆರೋಪಿ. ಪವಿತ್ರ ಮತ್ತು ಸಚಿನ್ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದರು. ಆ ಬಳಿಕ ಪ್ರೀತಿಸಿ ಮದುವೆಯಾಗಿದ್ದರು. ಈ ಸಂದರ್ಭದಲ್ಲಿ ಪವಿತ್ರಾ ತಾನು ಇನ್ಫೋಸಿಸ್ ಉದ್ಯೋಗಿ, ತನಗೆ ಯಾರೂ ಇಲ್ಲ ಎಂದು ಹೇಳಿ ಸಚಿನ್ ಹೆತ್ತವರ ಆಶೀರ್ವಾದದೊಂದಿಗೆ ಸರಳ ವಿವಾಹವಾಗಿದ್ದರು. ಪ್ರತಿದಿನ ಸಚಿನ್ ಆಕೆಯನ್ನು ಕಚೇರಿಗೆ ಬಿಡುತ್ತಿದ್ದ. ಆದರೆ ಕೆಲ ಸಮಯದ ಬಳಿಕ ಆಕೆಯ ನಡವಳಿಕೆಯ ಮೇಲೆ ಅನುಮಾನ ಬಂದು, ಆಕೆಯ ದೊಡ್ಡಮ್ಮ ಎಂದು ಹೇಳಿಕೊಂಡ ವ್ಯಕ್ತಿಗೆ ಕರೆ ಮಾಡಿ ವಿಚಾರಿಸಿದಾಗ ಆಕೆ ಯಾರೆಂದೇ ತನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಆ ಬಳಿಕ ಆಕೆಯ ಅಣ್ಣ ಎಂದು ಹೇಳಿಕೊಂಡು ನಂಬರ್ ಕೊಟ್ಟಿದ್ದ ವ್ಯಕ್ತಿಗೆ ಕರೆ ಮಾಡಿದಾಗ ಆಕೆಗೆ ಮದುವೆಯಾಗಿ ಮೊದಲೇ ವಿಚ್ಛೇದನ ಆಗಿದ್ದ ಸಂಗತಿ ತಿಳಿಸಿದ್ದ. ಇದಾದ ಬಳಿಕ ಪತ್ನಿಯ ಮೇಲೆ ಹೆಚ್ಚು ನಿಗಾ ಇಟ್ಟಿದ್ದ. ಆಗಾಗ ಇವರಿಬ್ಬರ ನಡುವೆ ಜಗಳ ನಡೆಯುತ್ತಿತ್ತು. ಶುಕ್ರವಾರ ಆಕೆಯನ್ನು ಕೆಲಸಕ್ಕೆ ಇನ್ಫೋಸಿಸ್‌ಗೆ ಕರೆದೊಯ್ಯಲು ಹೋದಾಗ, ಆಕೆ ತನಗೆ ಆರೋಗ್ಯ ಸರಿ ಇಲ್ಲ ಎಂದು ಹೇಳಿದ್ದಾಳೆ. ಆ ಬಳಿಕ ಆಕೆಯ ಐಡಿ ಕಾರ್ಡ್ ಪರಿಶೀಲನೆ ನಡೆಸಿದಾಗ ಅದು ನಕಲಿ ಎಂದು ತಿಳಿದಿದೆ. ಇದರಿಂದ ಪತಿ ಪತ್ನಿ ನಡುವೆ ಮತ್ತೆ ಜಗಳವಾಗಿದೆ. ಕೊನೆಗೆ ಆಕೆಯನ್ನು ಪುಸಲಾಯಿಸಿ ಹೊರಗಡೆ ಕರೆದುಕೊಂಡು ಹೋಗುವ ನೆಪದಲ್ಲಿ ತಮ್ಮ ಜಮೀನಿಗೆ ಕರೆದುಕೊಂಡು ಹೋಗಿ ಅಪ್ರಾಪ್ತ ಬಾಲಕನೊಬ್ಬನ ಸಹಾಯದಿಂದ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ನಡೆಸಿದ್ದಾನೆ. ಆ ಬಳಿಕ ನೇರವಾಗಿ ಪೊಲೀಸರಿಗೆ ಶರಣಾಗಿದ್ದಾನೆ.