ದಾವಣಗೆರೆ: ಸರ್ಕಾರಿ ನೌಕರರ ಹಾಗೆ ಖಾಸಗಿ ವ್ಯಕ್ತಿಗಳಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿ ಹರಿಹರ ನಗರಸಭೆಯ ಪೌರಾಯುಕ್ತ, ಕಂದಾಯಾಧಿಕಾರಿ, ಪ್ರಭಾರ ಕಂದಾಯಾಧಿಕಾರಿ, ಕಚೇರಿಯ ವ್ಯವಸ್ಥಾಪಕಿ ಸೇರಿದಂತೆ ಒಟ್ಟು 7 ಜನರ ವಿರುದ್ಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಲೋಕಾಯುಕ್ತ ಪೊಲೀಸರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಹರಿಹರ ನಗರಸಭೆಯ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಕಚೇರಿ ವ್ಯವಸ್ಥಾಪಕಿ ನಿರಂಜನಿ, ಕಂದಾಯ ನಿರೀಕ್ಷಕಿ ಚಿತ್ರಾ, ಪ್ರಭಾವ ಕಂದಾಯ ನಿರೀಕ್ಷಕ ರಮೇಶ್, ಸರ್ಕಾರಿ ನೌಕರರಂತೆ ಕಾರ್ಯ ನಿರ್ವಹಿಸುತ್ತಿದ್ದ ಮೌನೇಶ್, ಮಹಮ್ಮದ್ ಹಫೀಸ್‌ವುಲ್ಲಾ, ಹನುಮಂತಪ್ಪ ತುಂಬಿಗೆರೆ ವಿರುದ್ದ ಲೋಕಾಯುಕ್ತ ಪೊಲೀಸರು ದೂರು ಸಲ್ಲಿಸಿರುವುದಾಗಿದೆ. ಜಿಲ್ಲಾ ಲೋಕಾಯುಕ್ತ ಪೊಲೀಸರು ಎ.7 ರಂದು ಹರಿಹರ ನಗರಸಭೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು.