ಮಂಗಳೂರು: ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಾ ಸಾಗುತ್ತಿದೆ. ಇದೀಗ ಈ ಕೇಸಿನಲ್ಲಿ ಮಂಗಳೂರು ಮೂಲದ್ದು ಎನ್ನಲಾದ ಐದರಿಂದ ಆರು ಮಂದಿ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ ಹುಡುಗಿಯರೂ ಸಿಲುಕಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಮೂಲಗಳಿಂದ ಲಭಿಸಿದೆ. ರಾಜಕೀಯ ಪ್ರಭಾವ ಬಳಸಿಕೊಂಡು ನೂರಾರು ಯುವತಿಯರ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳು ಹಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು.
ಇದರಲ್ಲಿ ಮಂಗಳೂರು ಮೂಲದ ಐದಾರು ಮಂದಿ ಹುಡುಗಿಯರ ಮುಖಚರ್ಯೆಯನ್ನು ಹೋಲುವ ತುಣುಕುಗಳೂ ಇವೆ ಎನ್ನಲಾಗುತ್ತಿದೆ. ಮಂಗಳೂರು ಮೂಲದ ಯುವತಿಯೋರ್ವಳು ಈ ತುಣುಕುಗಳ ಹಿಂದಿನ ಮಾಸ್ಟರ್ ಮೈಂಡ್ ಎನ್ನಲಾಗುತ್ತಿದ್ದು, ಈಕೆಯೇ ಈ ಹುಡುಗಿಯರನ್ನು ಸಪ್ಲೈ ಮಾಡಿರಬಹುದೆನ್ನುವ ಶಂಕೆ ವ್ಯಕ್ತವಾಗಿದೆ. ಈ ವಿಡಿಯೋ ತುಣುಕುಗಳು ವಿಶೇಷ ತನಿಖಾ ತಂಡದ ಕೈ ಸೇರಿದ್ದು, ವಿಚಾರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ವಿಡಿಯೋದಲ್ಲಿ ಕಾಣಿಸಿದ ಹುಡುಗಿಯರ ಮಾಹಿತಿಗಳನ್ನು ವಿಶೇಷ ತನಿಖಾ ತಂಡ ಕಲೆ ಹಾಕಿದೆ. ಈ ಮೂಲಕ ಈ ಕೇಸಿಗೆ ಹಾಸನ ದಿಂದ ಮಂಗಳೂರಿಗೂ ಲಿಂಕ್ ಸಿಕ್ಕಂತಾಗಿದೆ.
ಅಷ್ಟಕ್ಕೂ ಇದು ಎಐ ಟೆಕ್ನಾಲಜಿ ಮೂಲಕ ಅಮಾಯಕ ಹುಡುಗಿಯರ ಮುಖಚರ್ಯೆಯನ್ನು ಬಳಸಿ ಮಾರ್ಪ್ ಮಾಡಿದ ವಿಡಿಯೋಗಳೋ ಅಲ್ಲವೋ ಎಂದು ತಿಳಿದುಬಂದಿಲ್ಲ. ಪ್ರಜ್ವಲ್ ರೇವಣ್ಣನ ಏಳಿಗೆಯನ್ನು ಸಹಿಸದೆ ಡೀಫ್ ಫೇಕ್ ಮಾಡಿದ ವಿಡಿಯೋಗಳೂ ಆಗಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ. ವಿಶೇಷ ತನಿಖಾ ತಂಡ ಈ ನಿಟ್ಟಿನಲ್ಲೂ ತನಿಖೆ ನಡೆಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಇದರ ಅಸಲಿಯತ್ ಬಹಿರಂಗಗೊಳ್ಳುವ ಸಾಧ್ಯತೆ ಇದೆ