ಮಂಗಳೂರು : ಧರ್ಮಸ್ಥಳ ಸಂಘದಲ್ಲಿ ಶೇ. 40ರಷ್ಟು ಬಡ್ಡಿಯನ್ನು ಬಡವರ ಮೇಲೆ ಜಡಿಯಲಾಗುತ್ತಿದೆ ಎಂದು ಮಳವಳ್ಳಿಯ ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗಂಭೀರ ಆರೋಪ ಮಾಡಿದ್ದರೂ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಯಾಕೆ ಮಾತಾಡುತ್ತಿಲ್ಲ, ಯಾಕೆ ಸ್ಪಷ್ಟೀಕರಣ ನೀಡುತ್ತಿಲ್ಲ? ಹಾಗಾದರೆ ನರೇಂದ್ರ ಸ್ವಾಮಿ ಸತ್ಯವನ್ನೇ ಹೇಳಿದ್ದಾರೆಯೇ ಎಂದು ಸಾರ್ವಜನಿಕರು ಪ್ರಶ್ನಿಸಲಾರಂಭಿಸಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯದ ಆಶ್ರಯದದಲ್ಲಿ ನಡೆಯುತ್ತಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ಕಾರ್ಯ ವಹಿವಾಟಿನ ಬಗ್ಗೆ ಮಳವಳ್ಳಿಯ ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾಡಿರುವ ಗಂಭೀರ ಆರೋಪ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ.
ಮಳವಳ್ಳಿ ತಾಲೂಕಿನ ಹಾಡ್ಲಿಯಲ್ಲಿ ಮಾತನಾಡುತ್ತಿದ್ದ ನರೇಂದ್ರಸ್ವಾಮಿ, “ಧರ್ಮಸ್ಥಳ ಸಂಘ ಇದೆಯಲ್ಲಾ, ಅದಕ್ಕೆ ನೀವು ಕಟ್ಟುತ್ತಿರುವ ಬಡ್ಡಿ ಎಷ್ಟು? ನೀವೆಲ್ಲಾ ಮಂಜುನಾಥಸ್ವಾಮಿಯನ್ನು ನಂಬಿಕೊಂಡು ಬಿಟ್ಟಿದ್ದೀರಾ? ಹೆಸರು ಮಾತ್ರ ಧರ್ಮಸ್ಥಳ, ಆದರೆ ಅಲ್ಲಿ ಧರ್ಮದ ಕೆಲಸವೇ ನಡೆಯುತ್ತಿಲ್ಲ. ವಾರಕ್ಕೆ, ತಿಂಗಳಿಗೆ ಬಡ್ಡಿ ಕಟ್ಟಿ, ಕೂಲಿನಾಲಿ ಮಾಡಿ ಕಷ್ಟಪಟ್ಟು ನೀವು ಯಾರನ್ನು ಶ್ರೀಮಂತರನ್ನಾಗಿ ಮಾಡುತ್ತಿದ್ದೀರಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ವಿರುದ್ದ ನರೇಂದ್ರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
” ಆ ಸಂಘ ಕೊಡುವುದು ಬರೀ ಹತ್ತಿಪ್ಪತ್ತು ಸಾವಿರ, ಆ ಅಸಲು ದುಡ್ಡಿಗೆ ನೀವು ಬಡ್ಡಿ ಸಮೇತ ಎಷ್ಟು ವಾಪಸ್ ಕಟ್ಟುತ್ತೀರಿ ಎನ್ನುವ ಲೆಕ್ಕಾಚಾರ ನಿಮಗೆ ಇಲ್ಲವೇ ಇಲ್ಲ. ಈ ಪಿಡುಗನ್ನು ತಪ್ಪಿಸಬೇಕೆಂದರೆ, ಮಹಿಳೆಯರಿಗೆ ಜವಾಬ್ದಾರಿಯನ್ನು ನೀಡಬೇಕು ” ಎಂದು ನರೇಂದ್ರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ಮಹಿಳೆಯರಿಗೆ ನಮ್ಮ ಸರ್ಕಾರ ಮಾಸಿಕ ಎರಡು ಸಾವಿರ ರೂಪಾಯಿಯನ್ನು ನೀಡುತ್ತಿದೆ. ವಿರೋಧ ಪಕ್ಷಗಳು ಈ ಯೋಜನೆಯ ಬಗ್ಗೆ ಬಹಳ ತುಚ್ಚವಾಗಿ ಮಾತನಾಡುತ್ತಿವೆ. ಮಹಿಳೆಯರೇ ನಿಮ್ಮ ಆತ್ಮಸಾಕ್ಷಿಯಿಂದ ಹೇಳಿ, ಈ ಯೋಜನೆ ನಿಮಗೆ ಉಪಯೋಗವಾಗುತ್ತಿಲ್ಲವೇ ಎಂದು ನರೇಂದ್ರಸ್ವಾಮಿ, ಸಭೆಯಲ್ಲಿ ನೆರೆದಿದ್ದ ಮಹಿಳೆಯರನ್ನು ಪ್ರಶ್ನಿಸಿದ್ದಾರೆ.
ಸರ್ಕಾರೀ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನರೇಂದ್ರಸ್ವಾಮಿ, ಬೇರೆ ಬ್ಯಾಂಕುಗಳಲ್ಲಿ ತಿಂಗಳಿಗೊಮ್ಮೆ ಬಡ್ಡಿಯನ್ನು ಹಾಕಲಾಗುತ್ತದೆ. ಧರ್ಮಸ್ಥಳ ಸಂಘದಲ್ಲಿ ವಾರಕ್ಕೆ ಬಡ್ಡಿಯನ್ನು ಜಡಾಯಿಸುತ್ತಾರೆ. ಶೇ. 40ರಷ್ಟು ಬಡ್ಡಿಯನ್ನು ಬಡವರ ಮೇಲೆ ಹಾಕಲಾಗುತ್ತಿದೆ ಎಂದು ನರೇಂದ್ರಸ್ವಾಮಿ ಆರೋಪಿಸಿದ್ದಾರೆ.
ಧರ್ಮಸ್ಥಳ ಸಂಘ ಸಾಲ ತೆಗೆದುಕೊಂಡವರ ಶೋಷಣೆಯನ್ನು ಮಾಡುತ್ತಿದೆ. ಈ ಕಾರಣಕ್ಕಾಗಿಯೇ ನಾವು ಎರಡು ಸಾವಿರ ಮಾಸಿಕ ಹಣವನ್ನು ತಾಯಂದಿರಿಗೆ ನೀಡುತ್ತಿರುವುದು. ಇಂತಹ ಸಂಘದಿಂದ ತೆಗೆದುಕೊಂಡ ಹಣವನ್ನು ವಾಪಸ್ ಮಾಡಲು ಜನರು ಒದ್ದಾಡುತ್ತಿದ್ದಾರೆ. ಅದಕ್ಕಾಗಿಯೇ ನಮ್ಮ ಗೃಹಲಕ್ಷ್ಮೀ ಯೋಜನೆ ಎಂದು ಶಾಸಕ ನರೇಂದಸ್ವಾಮಿ ಹೇಳಿದ್ದಾರೆ.
ನರೇಂದ್ರಸ್ವಾಮಿಯವರ ಆರೋಪ ಸಾಕಷ್ಟು ಚರ್ಚೆಗೆ ನಾಂದಿ ಹಾಡಿದೆ. ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಆರೋಪಗಳು ಕೇಳಿ ಬರುತ್ತಿತ್ತು. ಈಗ, ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಬಹಿರಂಗವಾಗಿಯೇ ಧರ್ಮಸ್ಥಳದ ಸಂಘದ ಬಗ್ಗೆ ಆರೋಪವನ್ನು ಮಾಡಿರುವುದು ಮೀಟರ್ ಬಡ್ಡಿ ಹೋರಾಟಗಾರರಿಗೆ ಒಂದು ಅಸ್ತ್ರ ಸಿಕ್ಕಂತಾಗಿದೆ.
ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟೆಣ್ಣನವರ್ ನೇತೃತ್ವದಲ್ಲಿ ಧರ್ಮಸ್ತಳ ಸಂಘದ ಬಡ್ಡಿ ವಿಚಾರವಾಗಿ ಹೋರಾಟ ನಡೆಯುತ್ತಿದೆ. ಸೋಷಿಯಲ್ ಮೀಡಿಯಾಗಳ ಮೂಲಕವೂ ಧರ್ಮಸ್ಥಳ ಸಂಘದ ವಸೂಲಿ ವಿರುದ್ದ ಜನರು ಧ್ವನಿ ಎತ್ತುತ್ತಿದ್ದಾರೆ. ಯಾವುದೇ ಸಮಸ್ಯೆ ಇದ್ದರೂ ವಾರಪ್ರತಿ ತಪ್ಪದೆ ಕಂತು ಕಟ್ಟುವ ಬಗ್ಗೆ ಆರೋಪಿಸುತ್ತಿದ್ದಾರೆ.
ರಾಜ್ಯಸಭಾ ಸಂಸದರಾಗಿರುವ ವೀರೇಂದ್ರ ಹೆಗಡೆಯವರು ಇದೀಗ ನರೇಂದ್ರ ಸ್ವಾಮಿ ಮಾಡಿರುವ ಆರೋಪಕ್ಕೆ ಯಾಕೆ ಪ್ರತಿಕ್ರಿಯಿಸಿಲ್ಲ. ಸಂಘದ ಪ್ರಮುಖರು ಯಾಕೆ ಸ್ಪಷ್ಟೀಕರಣ ನೀಡುತ್ತಿಲ್ಲ? ಧರ್ಮಸ್ಥಳ ಸಂಘದಿಂದ ಲಾಭ ಪಡೆದವರಿದ್ದರೆ ಅವರ್ಯಾಕೆ ಸುಮ್ಮನಿದ್ದಾರೆ? ಹೀಗೆಲ್ಲಾ ನಾನ ರೀತಿಯಲ್ಲಿ ಚರ್ಚೆಗಳು ಆರಂಭಗೊಂಡಿದೆ.