ಮಂಗಳೂರು: ಫರಂಗಿಪೇಟೆಯಲ್ಲಿ ನಡೆದ ವಿದ್ಯಾರ್ಥಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಪೊಲೀಸರು ನಿರ್ಲಕ್ಷ್ಯ ತೋರಿರುವುದಾಗಿ ಆರೋಪಿಸಿ ನಗರದ ಪೊಲೀಸ್ ಹೊರ ಠಾಣೆಗೆ ಮುತ್ತಿಗೆ ಹಾಕಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.
ಕಿದೆಬೆಟ್ಟು ಪದ್ಮನಾಭ ಅವರ ಪುತ್ರ ದಿಗಂತ್ ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಆತನನ್ನು ಹುಡುಕುವಲ್ಲಿ ಪೊಲೀಸರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಮುಂದಿನ 24 ತಾಸುಗಳೊಳಗೆ ಬಾಲಕನನ್ನು ಪತ್ತೆ ಮಾಡದೇ ಇದ್ದಲ್ಲಿ ಪ್ರತಿಭಟನೆ ಮತ್ತು ಶನಿವಾರ ಫರಂಗಿಪೇಟೆಯನ್ನು ಬಂದ್ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ನಾಪತ್ತೆಯಾದ ಬಾಲಕ ಪತ್ತೆಯಾಗದೇ ಹೋದಲ್ಲಿ ಮಾರ್ಚ್ 1 ರ ಶನಿವಾರದಂದು ನಗರದ ಎಲ್ಲಾ ವ್ಯವಹಾರಿಕ ವಿಷಯಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಪ್ರತಿಭಟನಾ ನಿರತರು ಆಂಜನೇಯ ದೇವಸ್ಥಾನದ ವಠಾರದಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ.
ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ 2 ದಿನಗಳ ಹಿಂದೆ ಮನೆ ಬಿಟ್ಟಿದ್ದ ಬಾಲಕ ಅತ್ತ ದೇವಾಲಯಕ್ಕೂ ಹೋಗದೆ, ಇತ್ತ ಮನೆಗೂ ಬಾರದೆ ನಾಪತ್ತೆಯಾಗಿದ್ದ. ಆತನ ಮೊಬೈಲ್, ಚಪ್ಪಲಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದ್ದವು. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿರುವುದಾಗಿದೆ.