ಮಂಗಳೂರು: ನಗರದ ಎಸ್‌ಇಝಡ್ (ವಿಶೇಷ ಆರ್ಥಿಕ ವಲಯ) ಸಂಸ್ಥೆ ತೌಳವರ ಬಹುದೊಡ್ಡ ನಂಬಿಕೆಯಾಗಿರುವ ದೈವಾರಾಧನೆಗೆ ಅಡ್ಡಿ ಪಡಿಸುವ ಕೆಲಸ ಮಾಡುತ್ತಿದೆ ಎಂಬ ಆರೋಪ ದೈವ ಭಕ್ತರ ಸಮೂಹದಿಂದ ಕೇಳಿ ಬರುತ್ತಿದೆ.
ಬಜಪೆ ಗ್ರಾಮದ ನೆಲ್ಲಿದಡಿಗುತ್ತುವಿನ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಕಾಂತೇರಿ ಜುಮಾದಿ ದೈವಸ್ಥಾನಕ್ಕೆ ಸಂಬಂಧಿಸಿದ ಹಾಗೆ ಎಸ್‌ಇಝಡ್ ಹೊಸ ಖ್ಯಾತೆ ತೆಗೆದು ಭಕ್ತರ ಆಕ್ರೋಶಕ್ಕೆ ತುತ್ತಾಗಿದೆ. ಈ ದೇವಸ್ಥಾನದ ಪ್ರದೇಶ ಎಸ್‌ಇಝಡ್ ವಲಯದಲ್ಲಿದ್ದು, ಇಲ್ಲಿನ ದೈವಕ್ಕೆ ಇನ್ನು ಮುಂದೆ ಹೂ, ಹಣ್ಣು, ದೀಪ, ನೀರು ಮೊದಲಾದವುಗಳನ್ನು ಇಡಲು ಅನುಮತಿಸುವುದಿಲ್ಲ ಎನ್ನುವ ಮೂಲಕ ಸಂಸ್ಥೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ನೆಲ್ಲಿದಡಿಗುತ್ತುವಿಗೆ ಸಂಬಂಧಿಸಿದ ಜನರು ಮತ್ತು ದೈವ ಭಕ್ತರು ಸಂಸ್ಥೆಯ ಗಮನಕ್ಕೆ ತಂದು ಇಲ್ಲಿನ ಆರಾಧೆಗಳನ್ನು ನಡೆಸಿಕೊಂಡು ಈ ವರೆಗೆ ಬರುತ್ತಿದ್ದರು. ಕಳೆದ ಸಂಕ್ರಮಣದ ಅವಧಿಯಲ್ಲಿಯೂ ಆರಾಧನೆ ನಡೆಸಲು ಮನವಿ ಪತ್ರ ನೀಡುವ ಸಂದರ್ಭದಲ್ಲಿ, ಇದು ಕೊನೆಯ ಅವಕಾಶ. ಇನ್ನು ಮುಂದೆ ಇಲ್ಲಿ ಯಾವುದೇ ಆಚರಣೆ ನಡೆಸಲು ಅವಕಾಶ ಇಲ್ಲ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದು ಇದು ಭಕ್ತರನ್ನು ಕೆರಳಿಸಿದೆ.
ನಗರದಲ್ಲಿ ಎಸ್‌ಇಝಡ್ ಭೂಸ್ವಾಧೀನ ಮಾಡಿಕೊಳ್ಳುವ ಸಮಯದಲ್ಲಿ ಈ ಪ್ರದೇಶದಲ್ಲಿದ್ದ 22 ಮನೆಗಳನ್ನು ಸ್ಥಳಾಂತರಿಸಿತ್ತು. ಆದರೆ ಕಾಂತೇರಿ ಜುಮಾದಿಯ ಸ್ಥಾನವನ್ನು ಅಲ್ಲೇ ಉಳಿಸಲಾಗಿತ್ತು. ಈ ದೈವಕ್ಕೆ ನಿತ್ಯವೂ ದೀಪ, ಹೂ ಇಡುವುದು, ವಿಶೇಷ ದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲು ಈ ವರೆಗೆ ಅವಕಾಶ ಇತ್ತು. 2016 ರಲ್ಲಿಯೂ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಇದೇ ತೀರ್ಮಾನ ಬಂದಿತ್ತು. ಹೀಗಿದ್ದರೂ ಈಗ ಸಂಸ್ಥೆ ದೈವಾರಾಧನೆಗೆ ಅವಕಾಶ ನೀಡದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.