ಬಂಟ್ವಾಳ: ಪಾಣೆಮಂಗಳೂರಿನ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಲಾದ ಘಟನೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಬೆಂಗಳೂರಿನ ಕತ್ರಿಗುಪ್ಪೆಯ ನಿವಾಸಿ ಶಂಕರಯ್ಯ (50) ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆಂದೇ ಅವರು ಬೆಂಗಳೂರಿನಿಂದ ಮಂಗಳೂರಿನ ಬಂಟ್ವಾಳಕ್ಕೆ ಬಂದಿದ್ದರು ಎನ್ನಲಾಗುತ್ತಿದೆ.
ವ್ಯಕ್ತಿಯೊಬ್ಬರು ನದಿಗೆ ಹಾಕಿರುವ ಮಾಹಿತಿ ತಿಳಿದ ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ ಸಿದ್ದೀಕ್ ಎಂ. ಕೆ. ರೋಡ್ ಅವರು, ಶಂಕರಯ್ಯ ಅವರನ್ನು ಸುರಕ್ಷಿತವಾಗಿ ಮರಳಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ರಂಜಾನ್ ಉಪವಾಸದಲ್ಲಿದ್ದ ಸಿದ್ದೀಕ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವೈಯಕ್ತಿಕ ಸಮಸ್ಯೆಗಳ ಕಾರಣಕ್ಕೆ ಶಂಕರಯ್ಯ ಅವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರು ಎಂದು ತಿಳಿದು ಬಂದಿದ್ದು, ಅವರನ್ನು ಬಂಟ್ವಾಳ ನಗರ ಪೊಲೀಸರ ವಶಕ್ಕೆ ನೀಡಲಾಗಿದೆ.