ವಿಟ್ಲ: ಇಲ್ಲಿನ ಪರಿಸರದಲ್ಲಿ ಕಲ್ಲಿನ ಕೋರೆಗಳ ಹಾವಳಿ ಹೆಚ್ಚಾಗಿದ್ದು, ಅಧಿಕಾರಿಗಳು ಮಾತ್ರ ಈ ಬಗ್ಗೆ ಕಣ್ಣು ಮುಚ್ಚಿ ಕುಳಿತಿರುವುದು ದುರಂತ.
ಇಂದು ಮಾಡತ್ತಡ್ಕದಲ್ಲಿರುವ ಕಲ್ಲಿನ ಕೋರೆಯೊಂದರಲ್ಲಿ ಸಂಭವಿಸಿದ ಸ್ಫೋಟಕ್ಕೆ ವಿಟ್ಲ, ಕಂಬಳಬೆಟ್ಟು, ಚಂದಳಿಕೆ, ಮೇಗಿನ ಪೇಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜನರು ಬೆಚ್ಚಿಬಿದ್ದ ಘಟನೆ ನಡೆದಿದೆ. ವಿಟ್ಲ ಪರಿಸರದಲ್ಲಿ ದೊಡ್ಡ ಅನಾಹುತ ಸಂಭವಿಸಿತೋ ಏನೋ ಎನ್ನುವಂತೆ ದೊಡ್ಡ ಪ್ರಮಾಣದಲ್ಲಿ ಈ ಸ್ಪೋಟದ ಸದ್ದು ಕೇಳಿಸಿದೆ. ಪರಿಣಾಮ ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟು, ಹಂಚುಗಳು ಬಿದ್ದು ಹುಡಿಯಾದ ಘಟನೆಯೂ ನಡೆದಿದ್ದು ಈ ಸದ್ದು ಕೆಲ ಸಮಯ ಜನರನ್ನು ಆತಂಕಕ್ಕೆ ದೂಡಿತ್ತು ಎನ್ನುವುದು ಸ್ಪಷ್ಟ.
ಘಟನೆಯ ಬಳಿಕ ವಿಟ್ಲ ಪೊಲೀಸರು ಸೇರಿದಂತೆ ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಪರಿಸರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲಿನ ಕೋರೆಗಳಿಂದ ಸಾರ್ವಜನಿಕರು ಆತಂಕದಲ್ಲೇ ಬದುಕುವ ಸ್ಥಿತಿ ಇದೆ. ಇಂತಹ ಆಪತ್ತಿಗೆ ಆಹ್ವಾನ ನೀಡುವ ಕೋರೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಸ್ಥಳೀಯ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ಸಹ ಈ ವೇಳೆ ನಡೆಯಿತು ಎಂದು ಮೂಲಗಳು ತಿಳಿಸಿವೆ.