ಬೆಂಗಳೂರು: ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆರೋಪಿ ರನ್ಯಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ಮಾಡಿದ್ದು, ಆದೇಶವನ್ನು ಮಾ. 14 ಕ್ಕೆ ಮೀಸಲಿರಿಸಿದೆ.
ರನ್ಯಾ ತನ್ನ ಬಳಿ ಯಾವುದೇ ವಸ್ತುಗಳು ಇಲ್ಲ ಎಂದು ತನ್ನನ್ನು ಕರೆದೊಯ್ಯಲು ಬಂದಿದ್ದ ಕಾನ್ಸ್‌ಟೆಬಲ್ ಸಹಾಯದಿಂದ ಹಸುರು ಮಾರ್ಗದಿಂದ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದರು. ಈ ಸಂದರ್ಭದಲ್ಲಿ ಲೋಹ ಪರಿಶೋಧಕ ಯಂತ್ರ ಸದ್ದು ಮಾಡಿದ್ದು, ಈ ಸಮಯದಲ್ಲಿ ಆಕೆಯನ್ನು ಪ್ರಶ್ನೆ ಮಾಡಿದಾಗ ತನ್ನ ಬಳಿ ಏನೂ ಇಲ್ಲ ಎಂಬುದಾಗಿಯೇ ಅಧಿಕಾರಿಗಳ ಜೊತೆಗೆ ವಾದ ಮಾಡಿದ್ದಳು. ಆ ಬಳಿಕ ಮಹಿಳಾ ಅಧಿಕಾರಿಗಳು ಆಕೆಯನ್ನು ತಪಾಸಣೆ ಮಾಡಿದಾಗ ಆಕೆಯ ತೊಡೆ, ಹೊಟ್ಟೆ, ಬೆಲ್ಟ್, ಶೂಗಳಲ್ಲಿ ಚಿನ್ನದ ತುಂಡುಗಳನ್ನು ತಂದಿರುವುದು ಪತ್ತೆಯಾಗಿದೆ. ಪ್ಯಾಂಟ್ ಜೇಬಿನಲ್ಲೂ ಚಿನ್ನದ ತುಂಡುಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆಯ ಬಳಿ ಸಿಕ್ಕ ಅಕ್ರಮ ಚಿನ್ನ ಎಲ್ಲವೂ 24 ಕ್ಯಾರೆಟ್‌ನ ಚಿನ್ನ ಎಂದೂ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಮತ್ತೊಂದೆಡೆ ಕಳೆದ ವರ್ಷದ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿಯೂ ಚಿನ್ನ ಖರೀದಿಸಿದ್ದ ಆಕೆ ಸ್ಥಳೀಯ ವಿಮಾನ ನಿಲ್ದಾಣಕ್ಕೆ ಜಿನೀವಾಗೆ ಹೋಗುವುದಾಗಿ ತಿಳಿಸಿ ಭಾರತಕ್ಕೆ ಬಂದಿದ್ದಳು. ಅವಳ ಮನೆಯಲ್ಲಿ ಪತ್ತೆಯಾದ ಚಿನ್ನಾಭರಣ, ನಗ ನಗದುವಿಗೆ ಸೂಕ್ತ ದಾಖಲೆಗಳನ್ನು ನೀಡುವುದಕ್ಕೂ ಆಕೆಗೆ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕದಲ್ಲೇ ಹುಟ್ಟಿ ಬೆಳೆದ ರನ್ಯಾ ‘ದುಬೈ ನಿವಾಸಿ’ ಎನ್ನುವ ಗುರುತಿನ ಚೀಟಿ ಹೊಂದಿದ್ದಾಳೆ. ಈಕೆ ಹವಾಲಾ ದಂಧೆ ನಡೆಸುವ ಶಂಕೆಯೂ ಇದ್ದು ಆಕೆಗೆ ಯಾವುದೇ ರೀತಿಯಲ್ಲೂ ಜಾಮೀನು ಮಂಜೂರು ಮಾಡಬಾರದು ಎಂದು ಅಧಿಕಾರಿಗಳು ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಇನ್ನು ರನ್ಯಾ ಪ್ರಕರಣದಲ್ಲಿ ಆಕೆಯ ಸ್ನೇಹಿತ ತರುಣ್‌ರಾಜ್ ಸಹ ಬಂಧಿತನಾಗಿದ್ದು, ಆತನ ವಿಚಾರಣೆಯ ವೇಳೆ ಸಾಕಷ್ಟು ಮಹತ್ವದ ಸಂಗತಿಗಳನ್ನು ಬಯಲು ಮಾಡಿದ್ದಾನೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ರಾಜ್ಯದ ಹೆಸರಾಂತ ಜ್ಯೋತಿಷಿಯೊಬ್ಬನ ಕೈವಾಡ ಇದೆ ಎಂದು ತಿಳಿದು ಬಂದಿದೆ. ಈ ಜ್ಯೋತಿಷಿ ದುಬೈನಲ್ಲಿ ಕ್ರಿಪ್ಟೋ ಕರೆನ್ಸಿ, ಹಣ ವಿನಿಮಯ ವ್ಯವಹಾರ ನಡೆಸುತ್ತಿದ್ದ. ಜೊತೆಗೆ ಈತನಿಗೆ ರಾಜಕೀಯ ನಾಯಕರುಗಳ ಜೊತೆಗೂ ನಂಟು ಇರಿಸಿಕೊಂಡಿದ್ದು, ಸಾಮಾಜಿಕ ಕಾರ್ಯಗಳಲ್ಲೂ ಹೆಸರು ಪಡೆದಿದ್ದಾನೆ ಎನ್ನಲಾಗುತ್ತಿದೆ.
ರನ್ಯಾ ಮದುವೆಯಲ್ಲಿ ಸಿದ್ದು, ಪರಮೇಶ್ವರ್ ಭಾಗಿ
ರನ್ಯಾ ವಿವಾಹದಲ್ಲಿ ಸಿ ಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭಾಗವಹಿಸಿದ್ದು, ರನ್ಯಾ ಜೊತೆ ಕೈ ಜೋಡಿಸಿದ ಸಚಿವರು ಯಾರು? ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ವಾರ್ ನಡೆಸಿದೆ.