ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಮಾಡಲು ನಟಿ ರನ್ಯಾ ರಾವ್ ಅವರು ತಮ್ಮ ಮಲ ತಂದೆ ಡಿಜಿಪಿ ರಾಮಚಂದ್ರ ರಾವ್ ಅವರ ಕಾರನ್ನು ಬಳಕೆ ಮಾಡಿರುವ ಶಂಕೆಯನ್ನು ಡಿಐಆರ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ರನ್ಯಾ ಅವರನ್ನು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಅವರ ಮಲತಂದೆ ರಾಮಚಂದ್ರ ರಾವ್ ಅವರ ಸರ್ಕಾರಿ ಕಾರಿನಲ್ಲಿ ಪಿಕ್‌ಅಪ್ ಮತ್ತು ಡ್ರಾಪ್ ಮಾಡಲಾಗಿದೆ ಎಂದು ತಿಳಿದು ಬಂದಿರುವುದಾಗಿ ಹೇಳಲಾಗುತ್ತಿದೆ.
ತಮ್ಮ ತಂದೆಯ ಹುದ್ದೆಯನ್ನು, ವಾಹನವನ್ನು ದುರುಪಯೋಗ ಮಾಡಿಕೊಂಡು ಅಕ್ರಮ ಚಿನ್ನ ಸಾಗಾಟವನ್ನು ಸರ್ಕಾರಿ ಕಾರಿನಲ್ಲಿ ಸಾಗಾಟ ಮಾಡಿರುವ ಸಂದೇಹ ಇದ್ದು, ಅಧಿಕಾರಿಗಳು ಅವರ ಟ್ರಾವೆಲ್ ಹಿಸ್ಟರಿ ಪರಿಶೀಲನೆ ಮಾಡುತ್ತಿದ್ದಾರೆ. ಇದರಿಂದ ರಾವ್ ಅವರ ಕಾರು ಚಾಲಕನಿಗೂ ಸಂಕಷ್ಟ ಎದುರಾಗುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ.
ಇನ್ನು ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿ ರನ್ಯಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.