ಬೆಂಗಳೂರು: ಕರ್ನಾಟಕದಲ್ಲಿ ಹರಡಿಕೊಂಡಿರುವ ಮಾದಕ ದ್ರವ್ಯದ ಜಾಲವನ್ನು ಬುಡಕಟ್ಟು ಸಮೇತ ನಿರ್ಮೂಲನೆ ಮಾಡುವುದು ನಮ್ಮ ಸರ್ಕಾರದ ಗುರಿ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎಂಬಂತೆ ಅತಿ ದೊಡ್ಡ ಪ್ರಮಾಣದ ಮಾದಕ ದ್ರವ್ಯ ಜಾಲವನ್ನು ಪತ್ತೆ ಮಾಡಿ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಪೊಲೀಸರ ಕಾರ್ಯ ಶ್ಲಾಘನೀಯ. ಸುಮಾರು 75 ಕೋಟಿಗೂ ಅಧಿಕ ಮಾಲ್ಯದ ಸುಮಾರು 37 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳುವ ಮೂಲಕ ಹಲವಾರು ಜನರ ಬದುಕಿಗೆ ಅಪಾಯಕಾರಿಯಾಗಬಹುದಾಗಿದ್ದ ವಿಷಯವೊಂದನ್ನು ನಮ್ಮ ಪೊಲೀಸರು ತಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಡ್ರಗ್ಸ್ ಮುಕ್ತ ಕರ್ನಾಟಕದ ಕನಸಿನ ಜೊತೆಗೆ ನಾವು ಆಡಳಿತ ಚುಕ್ಕಾಣಿ ಹಿಡಿದ ಮೊದಲ ದಿನದಿಂದಲೂ ಕೆಲಸ ಮಾಡುತ್ತಿದ್ದೇವೆ. ಡ್ರಗ್ಸ್ ಮಾರಾಟ ಮತ್ತು ಸೇವನೆಯ ವಿರುದ್ಧ ಸಮರ ಸಾರಿದ್ದೇವೆ. ಈ ಹಿಂದೆಯೇ ಮಂಗಳೂರನ್ನು ಡ್ರಗ್ಸ್ ಮುಕ್ತ ಮಾಡುವ ವಾಗ್ದಾನ ನೀಡಿದ್ದು, ಆ ಪ್ರಯತ್ನದ ಭಾಗವಾಗಿ ಇಂದು ಬಹು ದೊಡ್ಡ ಡ್ರಗ್ಸ್ ಜಾಲವನ್ನು ವಶಕ್ಕೆ ಪಡೆಯಲಾಗಿದೆ ಎಂದವರು ನುಡಿದಿದ್ದಾರೆ.