ಮೈಸೂರು: ರಘುಪತಿ ಭಟ್ಟರಿಗೆ ಎಂಎಲ್ಸಿ ಟಿಕೆಟ್ ನಿರಾಕರಿಸಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಮರುಕ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಎಕ್ಸ್ ಮತ್ತು ಫೇಸ್ಬುಕ್ನಲ್ಲಿ ‘ ಉಡುಪಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಮವಸ್ತ್ರ ಸಂಹಿತೆಯನ್ನು ಮುರಿದು ಬುರ್ಖಾ ಧರಿಸಿ ಕ್ಲಾಸಿಗೆ ಬಂದ ಜಿಹಾದಿ ಮನಸ್ಥಿತಿಯ ವಿರುದ್ಧ ಹೋರಾಡಿದ ರಘುಪತಿ ಭಟ್ಟರಿಗೆ MLA ಟಿಕೆಟ್ಟೂ ಸಿಗಲಿಲ್ಲ, MLC ಟಿಕೆಟ್ಟನ್ನೂ ಕೊಡಲಿಲ್ಲ. ಸಾಲದೆಂಬಂತೆ ಪಕ್ಷದಿಂದಲೂ ಉಚ್ಛಾಟನೆಗೆ ಒಳಗಾಗಿ ಬುರ್ಖಾ ಸ್ಟೂಡೆಂಟ್ ಆಲಿಯಾ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ.’ ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ಎಂಎಲ್ಸಿ ಚುನಾವಣೆಯಲ್ಲಿ ರಘುಪತಿ ಭಟ್ಟರನ್ನು ಗೆಲ್ಲಿಸುವಂತೆ ಪರೋಕ್ಷವಾಗಿ ಕಾರ್ಯಕರ್ತರಿಗೆ ಮತ್ತು ಪದವೀಧರಿಗೆ ಸೂಚಿಸಿದ್ದಾರೆ.
ಮೈಸೂರಿನ ಸಮಗ್ರ ಅಭಿವೃದ್ಧಿಯ ಮೂಲಕ ಜಿಲ್ಲೆಯ ಚಿತ್ರಣವನ್ನೇ ಬದಲಿಸಿದ ಸಂಸದ ಪ್ರತಾಪ್ ಸಿಂಹರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿತ್ತು. ಅದೇ ರೀತಿ ರಘುಪತಿ ಭಟ್ಟರಿಗೂ ಎಂಎಲ್ಎ ಟಿಕೆಟ್ ನಿರಾಕರಿಸಿದ್ದಲ್ಲದೆ, ಎಂಎಲ್ಸಿ ಟಿಕೆಟನ್ನೂ ನಿರಾಕರಿಸಿ ಕಾಂಗ್ರೆಸ್ನಿಂದ ಬಂದ ಡಾ. ಧನಂಜಯ ಸರ್ಜಿ ಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ.
ಅನ್ಯ ಪಕ್ಷದಿಂದ ಬಂದ ಆಮದು ಅಭ್ಯರ್ಥಿಗೆ ಟಿಕೆಟ್ ನೀಡಿರುವುದನ್ನು ಖಂಡಿಸಿ ರಘುಪತಿ ಭಟ್ ನೈಋತ್ಯ ಪದವೀಧರ ಕ್ಷೇತ್ರದಿಂದ ಸ್ವತಂತ್ರ ವಾಗಿ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಘುಪತಿ ಭಟ್ಟರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿತ್ತು.
ಇದರಿಂದ ಖುಷಿಯಾದ ಹಿಜಾಬ್ ಹುಡುಗಿ ಅಲಿಯಾ ಅಸ್ಸಾದಿ ರಘುಪತಿ ಭಟ್ಟರ ಪರಿಸ್ಥಿತಿಗೆ ಗೇಲಿ ಮಾಡಿ ಪೋಸ್ಟ್ ಹಾಕಿದ್ದರು. ಕೆಲ ವರ್ಷಗಳ ಹಿಂದೆ ಉಡುಪಿ ಶಾಲೆಯಲ್ಲಿ ಹಿಬಾಜ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಶಾಲೆಯಿಂದ ಅಂದು ಉಚ್ಚಾಟನೆಯಾಗಿದ್ದ ವಿದ್ಯಾರ್ಥಿನಿ ಅಲಿಯಾ ಅಸ್ಸಾದಿ, ‘ದೇವನು ತಾನಿಚ್ಚಿಸಿದ್ದನ್ನು ಮಾಡಿಯೇ ತೀರುವನು. ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನಗಳಿರುವಾಗ ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ? ಆದರೆ ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು. ರಘುಪತಿ ಭಟ್ ಅವರೇ, ಅಂದು ನಾನು ಉಚ್ಚಾಟಿತ ವಿದ್ಯಾರ್ಥಿ, ನಿಮಗೆ ಪಕ್ಷದಲ್ಲಿ ಪದವಿ. ಇಂದು ನಾನು ವಕೀಲೆ ಪದವಿ ವಿದ್ಯಾರ್ಥಿ, ನೀವು ಉಚ್ಚಾಟಿತ ವ್ಯಕ್ತಿ’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು.
ಈ ಟೀಕೆಗೆ ತಿರುಗೇಟು ನೀಡಿದ್ದ ರಘುಪತಿ ಭಟ್, ‘ಹಿಂದೆ ಉಡುಪಿಯಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಹಿಜಾಬ್ ಪ್ರಕರಣವನ್ನು ಸಮವಸ್ತ್ರ ಆಧಾರಿತವಾಗಿ ನಾನು ನೋಡಿದ್ದೇನೆಯೇ ಹೊರತು, ಧರ್ಮಾಧಾರಿತವಾಗಿ ನೋಡಿಲ್ಲ. ಹಿಜಾಬ್ ಅನ್ನು ನಾನು ಸಮವಸ್ತ್ರದ ರೀತಿಯಲ್ಲಿ ನೋಡಿದ್ದೆ, ನಾನು ಶಾಸಕನಾಗುವ ಮುನ್ನ ಆ ಶಾಲೆಯಲ್ಲಿ ಸಮವಸ್ತ್ರ ಪದ್ದತಿ ಜಾರಿಯಲ್ಲಿತ್ತು. ಹಾಗಾಗಿ, ಅದು ಹೋರಾಟಕ್ಕೆ ಕಾರಣವಾಯಿತೇ ವಿನಃ, ಧರ್ಮಾಧಾರಿತವಾಗಿ ನೋಡಿರಲಿಲ್ಲ’ ಎಂದು ತಿರುಗೇಟು ನೀಡಿದ್ದರು.
ಅ ವಿದ್ಯಾರ್ಥಿನಿ ಕೆಲವು ಸಂಘಟನೆಗಳ ಪ್ರಭಾವಕ್ಕೆ ಒಳಗಾಗಿದ್ದರು, ಹಾಗಾಗಿಯೇ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು. ಕಾಲೇಜಿನಲ್ಲಿ ಆಕೆ ಶಿಸ್ತು ತಪ್ಪುಬಾರದಾಗಿತ್ತು. ಇದಕ್ಕಾಗಿಯೇ ಇದು ದೊಡ್ಡದಾಗಿ ಬೆಳೆಯಿತು ಎಂದು ರಘುಪತಿ ಭಟ್ ಅಭಿಪ್ರಾಯ ಪಟ್ಟಿದ್ದರು.
ನಾನು ಮೂರು ಬಾರಿ ಉಡುಪಿಯ ಶಾಸಕನಾಗಿದ್ದೇನೆ, ಜನರ ಆಶೀರ್ವಾದ ಇಲ್ಲದಿದ್ದರೆ ಗೆಲ್ಲಲು ಸಾಧ್ಯವೇ? ಏನೇ ಆಗಲಿ, ಒಳ್ಳೆಯ ಶಿಕ್ಷಣದಿಂದ ಧರ್ಮಾದಂತೆ, ದೇಶದ್ರೋಹದ ಭಾವನೆ ಬರುವುದಿಲ್ಲ ಎನ್ನುವುದು ನನ್ನ ನಂಬಿಕೆ. ಆಕೆಯ ಶೈಕ್ಷಣಿಕ ಜೀವನಕ್ಕೆ ನಾನು ಶುಭ ಕೋರುತ್ತೇನೆ ಎಂದು ರಘುಪತಿ ಭಟ್ ಹೇಳಿದ್ದರು.
ಇದೀಗ ರಘುಪತಿ ಭಟ್ ಪರ ಬ್ಯಾಟ್ ಬೀಸಿರುವ ಪ್ರತಾಪ್ ಸಿಂಹಗೆ ಭರ್ಜರಿ ಕಾಮೆಂಟ್ಗಳು ಬರುತ್ತಿವೆ. ಬಿಜೆಪಿ ವರಿಷ್ಠರು ಪಕ್ಷದ ನಿಷ್ಠಾವಂತ ಅಭ್ಯರ್ಥಿಗಳನ್ನು ಕಡೆಗಣಿಸುತ್ತಿರುವುದಕ್ಕೆ ಟೀಕಿಸಿ, ಬಿಜೆಪಿ ಶುದ್ದೀಕರಣಗೊಳ್ಳಲು ಭಟ್ಟರು ಗೆಲ್ಲಲೇಬೇಕು ಎಂದು ಬರೆದಿದ್ದಾರೆ. ಪಕ್ಷದಲ್ಲಿ ರಘುಪತಿ ಭಟ್ಟರ ತರ ಪ್ರತಾಪ್ ಸಿಂಹರನ್ನೂ ಕಡೆಗಣಿಸಲಾಗುತ್ತಿದೆ ಎಂದು ಕಾಮೆಂಟ್ ಮೂಲಕ ರಾಜ್ಯ ಬಿಜೆಪಿಯನ್ನು ಟೀಕಿಸುತ್ತಿದ್ದಾರೆ.