ಮಂಗಳೂರು: ನಾಪತ್ತೆಯಾದ ಫರಂಗಿಪೇಟೆಯ ದಿಗಂತ್ ಪತ್ತೆಯಾದ ಬಳಿಕ, ಅದೇ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ತಿರುವು ಸಿಕ್ಕಿದೆ.
ಪತ್ತೆಯಾದ ದಿಗಂತ್ ಸದ್ಯ ಬೊಂದೇಲ್‌ನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯ ವಶದಲ್ಲಿದ್ದಾನೆ. ಈತ ಮನೆಗೆ ಹೋಗಲು ನಿರಾಕರಿಸುತ್ತಿದ್ದಾನೆ ಎಂದು ಪೊಲೀಸರು ತಮ್ಮ ಅಫಿಡವಿಟ್‌ನಲ್ಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಇದರಲ್ಲಿ ದಿಗಂತ್ ನಾಪತ್ತೆಯಿಂದ ಪತ್ತೆಯ ವರೆಗಿನ ಮತ್ತು ಆ ಬಳಿಕ ಎಲ್ಲಾ ವಿಷಯಗಳನ್ನು, ದಿಗಂತ್ ಹೇಳಿಕೆಗಳನ್ನು ಸಹ ಪೊಲೀಸರು ಉಲ್ಲೇಖ ಮಾಡಿದ್ದಾರೆ. ಆತ ಪರೀಕ್ಷಾ ಭಯದಿಂದ ನಾಪತ್ತೆಯಾಗಿರುವುದಾಗಿ ಹೇಳಿಕೆ ನೀಡಿದ್ದಾಗಿಯೂ ತಿಳಿಸಿದ್ದಾರೆ.
ಇದೇ ಸಮಯದಲ್ಲಿ ಆತನ ಪೋಷಕರು ತಮ್ಮ ಲಾಯರ್ ಮೂಲಕ ಮಗನನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದು, ಆತ ಪತ್ತೆಯಾದಂದು ತನ್ನ ತಾಯಿಗೆ ಕರೆ ಮಾಡಿ ನಾನು ನಾಪತ್ತೆಯಾದದ್ದಲ್ಲ, ಆತನನ್ನು ಯಾರೋ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ. ಜೊತೆಗೆ ಪಿಯುಸಿ ಪರೀಕ್ಷೆ ಇನ್ನೂ ಮುಗಿದಿಲ್ಲವಾಗಿದ್ದು, ಆತನಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವಂತೆಯೂ ಹೆತ್ತವರು ಮನವಿ ಮಾಡಿದ್ದಾರೆ.
ಪರೀಕ್ಷೆಯ ವಿಚಾರದಲ್ಲಿ ಆತನಿಗೆ ಅನಗತ್ಯ ಒತ್ತಡ ಯಾಕೆ ಹೇರುತ್ತೀರಿ ಎಂದು ಕೋರ್ಟ್ ಪೋಷಕರನ್ನು ಪ್ರಶ್ನೆ ಮಾಡಿದ್ದು, ಆತನೊಂದಿಗೆ ಮಾತನಾಡಿಸುವುದು, ಆತನನ್ನು ಮನೆಗೆ ಕರೆದುಕೊಂಡು ಹೋಗುವುದು ಸೇರಿದಂತೆ ಎಲ್ಲಾ ವಿಚಾರದಲ್ಲೂ ಮಕ್ಕಳ ಕಲ್ಯಾಣ ಸಮಿತಿಯೇ ನಿರ್ಧಾರ ಕೈಗೊಳ್ಳಲು ಕೋರ್ಟ್ ಸೂಚನೆ ನೀಡಿದೆ.