ಬೆಂಗಳೂರು: ಸಾಂಸಾರಿಕ ವಿಷಯಕ್ಕೆ ಸಂಬಂಧಿಸಿದ ಹಾಗೆ ಟೆಕ್ಕಿಯೊಬ್ಬರು ತಮ್ಮ ಪತ್ನಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಸಾರ ಮಾಡಬೇಕು ಎಂದಾದರೆ ದಿನಕ್ಕೆ 5 ಸಾವಿರ ರೂ. ನೀಡಬೇಕು. ಜೊತೆಗೆ ಸ್ವಂತ ಮಕ್ಕಳು ಮಾಡಿಕೊಳ್ಳುವುದರಿಂದ ಅಂದಗೆಡುತ್ತದೆ. ಹಾಗಾಗಿ ದತ್ತು ಮಕ್ಕಳನ್ನು ತೆಗೆದುಕೊಳ್ಳೋಣ ಎಂದು ಪತಿಯ ಮರ್ಮಾಂಗಕ್ಕೆ ಪತ್ನಿ ಒದ್ದಿದ್ದಾಳೆ ಎಂದು ವೈಯಾಲಿಕಾವಲ್ ಪೊಲೀಸ್ ಠಾಣೆಗೆ ಪತಿ ದೂರು ನೀಡಿದ್ದಾರೆ. ಆದರೆ ಇವರು ಸಂಪಿಗೆಹಳ್ಳಿ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಹಿನ್ನೆಲೆ ಈ ಬಗ್ಗೆ ಆ ವ್ಯಾಪ್ತಿಯಲ್ಲಿ ಬರುವ ಠಾಣೆಯಲ್ಲೇ ದೂರು ದಾಖಲಿಸುವಂತೆ ಸೂಚಿಸಲಾಗಿದೆ. ಪತಿ ಶ್ರೀಕಾಂತ್ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, 2022 ರಲ್ಲಿ ಬಿಂದು ಎಂಬಾಕೆಯನ್ನು ವಿವಾಹವಾಗಿದ್ದರು. ಅಲ್ಲಿಂದ ಈ ವರೆಗೆ ಒಂದು ದಿನವೂ ನಾವು ಜೊತೆಯಾಗಿ ಸಂಸಾರ ಮಾಡಿಲ್ಲ. ಬಲವಂತದಿಂದ ಮುಟ್ಟಲು ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡುತ್ತಾಳೆ ಎಂದು ಪತಿ ದೂರಿನಲ್ಲಿ ಹೇಳಿದ್ದಾರೆ. ಜೊತೆಗೆ ಹಣಕ್ಕಾಗಿ ಪೀಡಿಸುತ್ತಿದ್ದು, ಮರ್ಮಾಂಗಕ್ಕೂ ಪತ್ನಿ ಒದ್ದಿದ್ದಾಳೆ. ಪತ್ನಿಯ ತವರು ಮನೆಯವರಿಗೆ ಮನೆ ಖರೀದಿ ಮಾಡಲು 60 ಲಕ್ಷ ರೂ. ಕೇಳಿದ್ದರು ಎಂದು ದೂರುದಾರ ಆರೋಪಿಸಿದ್ದಾರೆ. ಈಗಲೇ ಮಕ್ಕಳು ಬೇಡ. ಅರವತ್ತು ವರ್ಷ ಕಳೆದ ಬಳಿಕ ಮಕ್ಕಳು ಮಾಡೋಣ ಎನ್ನುತ್ತಾಳೆ. ಪ್ರತಿ ನಿತ್ಯ ಸಂಸಾರ ಮಾಡಲು 5 ಸಾವಿರ ರೂ. ಗಳಿಗೆ ಬೇಡಿಕೆ ಇಡುತ್ತಾಳೆ. ವಿಚ್ಛೇದನ ಕೊಡಲು 45 ಲಕ್ಷ ರೂ. ಗಳಿಗೆ ಬೇಡಿಕೆ ಇಡುತ್ತಾಳೆ ಎಂದಿದ್ದಾರೆ. ಇದಕ್ಕೆ ಪ್ರತ್ಯಾರೋಪ ಮಾಡಿರುವ ಪತ್ನಿ ಬಿಂದು ಮಾಧ್ಯಮಗಳ ಮೂಲಕ ಪ್ರತಿಕ್ರಿಯೆ ನೀಡಿದ್ದು, ಪತಿ ಮತ್ತು ಆತನ ಕುಟುಂಬಸ್ಥರೇ ವರದಕ್ಷೆಣೆಗಾಗಿ ಪೀಡಿಸುತ್ತಿದ್ದಾರೆ. ಪತಿ ನನ್ನ ಮೇಲೆ ಹಲ್ಲೆ ಮಾಡುತ್ತಾರೆ. ಸರಿಯಾಗಿ ಆಹಾರ ನೀಡುತ್ತಿಲ್ಲ. ಅನ್ನಕ್ಕೆ ಅಕ್ಕಿ ಹೆಚ್ಚು ಹಾಕಿದರೂ ನಿಂದಿಸುತ್ತಾರೆ ಎಂದು ಹೇಳಿದ್ದಾರೆ.