ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಈ ಸಂಬಂಧ ಸೂಕ್ತ ಪರಿಶೀಲನೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಸಂಬಂಧ ಹೈಕೋರ್ಟ್‌ಗೆ ಮಹೇಶ್ ಜೋಶಿ ಅವರು ರಿಟ್ ಅರ್ಜಿ ಸಲ್ಲಿಸಿದ್ದು, ಇದನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯ ಪೀಠ ವಿಚಾರಣೆ ನಡೆಸಿದೆ. ಹಿರಿಯ ವಕೀಲ ಎಸ್. ಬಸವರಾಜು ಅವರು ಮಹೇಶ್ ಜೋಶಿ ಪರ ವಾದ ಮಂಡಿಸಿದ್ದು, ಮಂಡ್ಯದಲ್ಲಿ ನಡೆದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಳಿಕ ಜೋಶಿ ಅವರಿಗೆ ಜೀವ ಬೆದರಿಕೆ ಕರೆಗಳು, ವಿಡಿಯೋಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವರಿಗೆ 24*7 ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಮನವಿಯನ್ನು ಪರಿಗಣಿಸಿರುವ ನ್ಯಾಯಪೀಠ ಡಿಜಿ-ಐಜಿಪಿ ಅವರಿಗೆ ನೊಟೀಸ್ ಜಾರಿಗೊಳಿಸಲು ಆದೇಶಿಸಿದೆ. ಜೊತೆಗೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಅವರಿಗೆ ಈ ಸಂಬಂಧ ವರದಿ ಸಲ್ಲಿಸುವಂತೆ ಹೇಳಿದೆ. ಹಾಗೆಯೇ ವಿಚಾರಣೆಯನ್ನು ಮಾರ್ಚ್ 27 ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.