ಶಿರ್ವ: ಇಲ್ಲಿನ ಕೋಡು ಪಂಜಿಮಾರು ಶ್ರೀ ದುರ್ಗಾಂಬಿಕಾ ಅಂಗನವಾಡಿಗೆ ಕಳ್ಳರು ನುಗ್ಗಿದ್ದು, ಮೊಟ್ಟೆಯನ್ನೂ ಬಿಡದಂತೆ ಸುಮಾರು 8 ಸಾವಿರ ರೂ. ಮೌಲ್ಯದ ಸಾಮಗ್ರಿಗಳನ್ನು ಕದ್ದೊಯ್ದ ಘಟನೆ ನಡೆದಿದೆ. ಶ್ರೀ ದುರ್ಗಾಂಬಿಕಾ ಹಿರಿಯ ಪ್ರಾಥಮಿಕ ಶಾಲೆಯ ಗೇಟು ಮುರಿದು ಒಳ ಪ್ರವೇಶಿಸಿದ ಕಳ್ಳರು, ಅಂಗನವಾಡಿಗೆ ಅಳವಡಿಸಲಾದ ಕಬ್ಬಿಣದ ಗೇಟ್ ಮತ್ತು ಬಾಗಿಲು ಮುರಿದು ಒಳ ಪ್ರವೇಶ ಮಾಡಿದ್ದಾರೆ. ಬಳಿಕ ಗ್ಯಾಸ್ ಸಿಲಿಂಡರ್, ಅಡುಗೆ ತಯಾರಿಸುವ ಪಾತ್ರೆಗಳು, ಅಡುಗೆ ಸಾಮಗ್ರಿಗಳನ್ನು ದೋಚಿದ್ದಾರೆ. ಗರ್ಭಿಣಿ, ಬಾಣಂತಿಯರಿಗೆ ಸರ್ಕಾರದಿಂದ ನೀಡಲಾಗುವ ಮೊಟ್ಟೆಯನ್ನೂ ಬಿಡದೆ ಕದ್ದೊಯ್ದಿದ್ದಾರೆ. ಕೆಲ ಸಮಯದಿಂದ ಈ ಪರಿಸರದಲ್ಲಿ ಸಣ್ಣಪುಟ್ಟ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಪೊಲೀಸರು ಕಳ್ಳರನ್ನು ಶೀಘ್ರ ಪತ್ತೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಅಂಗನವಾಡಿ ಶಿಕ್ಷಕಿ ಉಷಾದೇವಿ ಅವರು ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.