ಮಂಗಳೂರು: ಪಾನಪ್ರಿಯರು ಏನು ಕೊಟ್ಟರೂ ಕುಡಿಯುತ್ತಾರೆ ಎಂದು ಕೆಲವು ಬಾರ್ ಮಾಲಕರು ಉಡಾಫೆಯಾಗಿ ವರ್ತಿಸುತ್ತಾರೆ. ಇದಕ್ಕೆ ಪೂರಕವೆಂಬಂತೆ ಮಂಗಳೂರಿನ ಪ್ರತಿಷ್ಠಿತ ಮದ್ಯ ಮಳಿಯೊಂದರಲ್ಲಿ ಅವಧಿ ಮೀರಿದ ಬೀಯರ್ ಮಾರಾಟ ಮಾಡಿದ ಆರೋಪ ಕೇಳಿಬಂದಿದೆ.
ವೈನ್ ಎನ್ ಸ್ಪಿರಿಟ್ಸ್ ಹೆಸರಿನ ಮದ್ಯದ ಮಳಿಗೆಯಲ್ಲಿ ಈ ಘಟನೆ ನಡೆದಿದ್ದಾಗಿ ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಪಟ್ಟ ರಶೀದಿ ಹಾಗೂ ಅವಧಿ ಮೀರಿದ ಬೀಯರ್‌ನ ಫೋಟೋಗಳು ವೈರಲ್ ಆಗುತ್ತಿದೆ. ಕೆಲವು ದಿನಗಳ ಹಿಂದೆ ಅಂದರೆ ಎ.28ರಂದು ಮದ್ಯ ಪ್ರಿಯರೊಬ್ಬರು ಈ ಮದ್ಯ ಮಳಿಗೆಗೆ ಹೋಗಿ 400ರೂ. ದರದಲ್ಲಿ ‘ಹೇವಾರ್ಡ್ಸ್ ಹೆಸರಿನ ೬೫೦ ಎಂಎಲ್‌ನ ಬೀಯರ್ ಆರ್ಡರ್ ಮಾಡಿದ್ದಾರೆ ಎನ್ನಲಾಗಿದೆ. ಬೀಯರ್ ಎಕ್ಸ್‌ಪೈರಿ ಡೇಟ್ ನೋಡಿದಾಗ ಅದರ ಅವಧಿ ಎ.22ಕ್ಕೆ ಮುಗಿದಾಗಿತ್ತು.
ಈ ಮದ್ಯದ ಮಳಿಗೆಯಲ್ಲಿ ಸಾವಿರಾರು ಮಂದಿ ಮದ್ಯಪ್ರಿಯರು ಅಮಲು ಪಾನೀಯಗಳನ್ನು ಖರೀದಿಸುತ್ತಾರೆ. ಮುಖ್ಯವಾಗಿ ಇಲ್ಲಿ ಎಂಆರ್‌ಪಿ ದರದಲ್ಲಿ ಮದ್ಯ ಮಾರಾಟವಾಗುವುದಲ್ಲದೆ, ಇಲ್ಲಿ ನಕಲಿ ಮದ್ಯ ಇರುವುದಿಲ್ಲ. ಅಲ್ಲದೆ ಇಲ್ಲಿ ಕಾಲಕಾಲಕ್ಕೆ ವಿಲೆವಾರಿ ನಡೆಸಿ ಗ್ರಾಹಕರಿಗೆ ಗುಣಮಟ್ಟದ ಅಮಲು ಪಾನೀಯಗಳನ್ನು ನೀಡುತ್ತಾರೆನ್ನುವುದು ನಂಬಿಕೆ. ಆದರೆ ಇಂಥಾ ಮಳಿಗೆಯಲ್ಲಿಯೇ ಅವಧಿ ಮೀರಿದ ಬೀಯರ್ ಮಾರಾಟ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಬಕಾರಿ ಇಲಾಖೆ ಈ ಬಗ್ಗೆ ತನಿಖೆ ಕೈಗೊಂಡು ಇದರ ಹಿಂದಿನ ಅಸಲಿಯತ್ ಕಂಡುಹಿಡಿಯಬೇಕು. ಅವಧಿ ಮೀರಿದ ಬೀಯರ್ ಮಾರಾಟ ಮಾಡಿದ್ದೇ ಆದರೆ ಈ ಮಳಿಗೆಗೆ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಮದ್ಯ ಪ್ರಿಯರು ಆಗ್ರಹಿಸಿದ್ದಾರೆ. ಬೊಂಡ ಫ್ಯಾಕ್ಟರಿ ಎಂಬ ಹೆಸರಿನ ಫ್ಯಾಕ್ಟರಿಯೊಂದರಲ್ಲಿ ಎಳನೀರು ಕುಡಿದು ೧೩೮ ಮಂದಿ ಅಸ್ವಸ್ಥರಾದ ಬಳಿಕ ಆ ಮಳಿಗೆಯನ್ನು ಬಂದ್ ಮಾಡಿರುವುದು ನಡೆದಿರುವ ಬೆನ್ನಲ್ಲೇ ಪ್ರತಿಷ್ಠಿತ ಮದ್ಯ ಮಳಿಯೊಂದರಲ್ಲಿ ಅವಧಿ ಮೀರಿದ ಬೀಯರ್ ಮಾರಾಟ ಮಾಡಿರುವುದು ವಿಪರ್ಯಾಸ ಎಂದು ಮದ್ಯ ಪ್ರಿಯರು ಆರೋಪಿಸಿದ್ದಾರೆ.