ಶಿವಮೊಗ್ಗ: ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ದೇಶಾದ್ಯಂತ ಹಲ್‌ಚಳ್ ಎಬ್ಬಿಸಿದ ಬೆನ್ನಲ್ಲೇ ಬಿಜೆಪಿಯ ಮಾಜಿ ಮುಖಂಡ, ಹಿರಿಯ ನಾಯಕ ಈಶ್ವರಪ್ಪರ ಪುತ್ರ ಕಾಂತೇಶ್ ಮಾಧ್ಯಮಗಳಿಗೆ ನಿರ್ಬಂಧ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿರುವುದು ಭಾರೀ ಕುತೂಹಲ ಕೆರಳಿಸಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರ ವಿರುದ್ಧ ತೊಡೆ ತಟ್ಟಿ ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಈಶ್ವರಪ್ಪ ಅವರ ಪುತ್ರ ಕಾಂತೇಶ್, ಮಾಧ್ಯಮಗಳಿಗೆ ನಿರ್ಬಂಧ ಕೋರಿ ಅರ್ಜಿ ಸಲ್ಲಿಸಿದ್ದು, ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಮಾನ್ಯ ಮಾಡಿದೆ. ಅಲ್ಲದೆ ಯಾವುದೇ ಮಾನಹಾನಿಕರ ದೃಶ್ಯ ಪ್ರಸಾರ ಮಾಡದಂತೆ ಮಾಧ್ಯಗಳಿಗೆ ಮಧ್ಯಂತರ ನಿರ್ಬಂಧಕಾಜ್ಞೆ ಹೊರಡಿಸಿದೆ.
ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸೆನ್ಷೇಷನ್ ಕ್ರಿಯೇಟ್ ಮಾಡಿವೆ. ಇಂಥಾ ವಿಡಿಯೋಗಳಿರುವ ಬೆದರಿಕೆ ಬಂದ ಕೂಡಲೇ ಪ್ರಜ್ವಲ್ ಎಚ್ಚರಿಕೆ ವಹಿಸಿದ್ದರೆ ಆ ವಿಡಿಯೋಗಳು ವೈರಲ್ ಆಗುತ್ತಿರಲಿಲ್ಲ. ಇದನ್ನು ಮನಗಂಡಿರುವ ಕಾಂತೇಶ್, ಲೋಕಸಭೆ ಚುನಾವಣೆ ವೇಳೆ ತಮ್ಮ ಹೆಸರಿಗೆ ಮಸಿ ಬಳಿಯುವ ಸಾಧ್ಯತೆಗಳಿವೆ. ದುರುದ್ದೇಶಪೂರಿತ ವಿಡಿಯೊ ಅಥವಾ ಇನ್ಯಾವುದೇ ಮಾಹಿತಿಗಳನ್ನು ಭಿತ್ತರಿಸುವ ಸಾಧ್ಯತೆಗಳಿವೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಕಾಂತೇಶ್ ಅಂತಹಾ ದೃಶ್ಯಗಳ ಪ್ರಸಾರಕ್ಕೆ ನಿರ್ಬಂಧ ಕೋರಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದನ್ನು ಕೋರ್ಟ್ ಪರಿಗಣಿಸಿದೆ.
ಅರ್ಜಿಯಲ್ಲಿರುವ ಅಂಶಗಳು: ಲೋಕಸಭೆ ಚುನಾವಣೆ ನಡೆಯುತ್ತಿರುವ ಈ ಸಮಯದಲ್ಲಿ ಕೆಲ ಮಾಧ್ಯಮಗಳು ನನ್ನ ಘನತೆ, ಗೌರವ ಮತ್ತು ಮಾನಹಾನಿ ಮಾಡಲು ಪ್ರಯತ್ನಿಸುತ್ತಿವೆ ಎಂಬ ಅನುಮಾನಗಳಿವೆ. ನನ್ನನ್ನೇ ನಕಲು ಮಾಡಿದ ಅಶ್ಲೀಲ ಪೋಟೊ, ವಿಡಿಯೊ ಮತ್ತು ಅಡಿಯೊಗಳನ್ನು ಪ್ರಸಾರ ಮಾಡಲು ಯತ್ನಿಸುತ್ತಿವೆ. ಒಂದೊಮ್ಮೆ ಅಂತಹ ಅಕ್ಷೇಪಾರ್ಹ ವಿಡಿಯೊ. ಫೋಟೊಗಳು ಪ್ರಸಾರಗೊಂಡರೆ ಅಥವಾ ಪ್ರಕಟವಾದರೆ ನನ್ನ ಮಾನಹಾನಿಯಾಗುತ್ತದೆ. ಆದ್ದರಿಂದ ಮಾಧ್ಯಮಗಳ ವಿರುದ್ಧ ಮಧ್ಯಂತರ ನಿರ್ಬಂಧಕಾಜ್ಞೆ ಆದೇಶ ನೀಡಬೇಕು ಎಂದು ಕಾಂತೇಶ್ ದಾವೆಯಲ್ಲಿ ಕೋರಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಎಸ್. ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಕೊಡದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಕೊಟ್ಟಿತ್ತು. ಈಗಾಗಲೇ ಹಾಲಿ ಶಾಸಕನಾಗಿದ್ದು, ಮುಖ್ಯಮಂತ್ರಿ ಪದವಿಯನ್ನೂ ಪಡೆದಿರುವ ಬೊಮ್ಮಾಯಿಗೆ ಟಿಕೆಟ್ ಕೊಟ್ಟಿದ್ದು ಯಾಕೆ? ನನ್ನ ಫ್ಯಾಮಿಲಿ ಮಾಡಿದ ತಪ್ಪೇನು? ಎಂಎಲ್‌ಎ ಟಿಕೆಟ್ ತಪ್ಪಿಸಿದರೂ ಸುಮ್ಮನಾಗಿದ್ದ ನಾನು ಇದೀಗ ಉದ್ದೇಶ ಪೂರ್ವಕವಾಗಿ ನನ್ನ ಮಗನಿಗೆ ಟಿಕೆಟ್ ತಪ್ಪಿಸಲಾಗಿದ್ದು, ಈ ಷಡ್ಯಂತ್ರದ ಹಿಂದೆ ಯಡಿಯೂರಪ್ಪ ಫ್ಯಾಮಿಲಿ ಇದೆ ಎನ್ನುವುದು ಈಶ್ವರಪ್ಪರ ಆಕ್ರೋಶ. ನಿಮ್ಮನ್ನು ಯಾವುದೋ ರಾಜ್ಯದ ರಾಜ್ಯಪಾಲನಾಗಿ, ನಿಮ್ಮ ಪುತ್ರನನ್ನು ಎಂಎಲ್‌ಸಿ ಮಾಡುವುದಾಗಿ ಬಿಜೆಪಿಯಿಂದ ಭರವಸೆ ಸಿಕ್ಕರೂ ಈಶ್ವರಪ್ಪ ಯಡಿಯೂರಪ್ಪರ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲು ಶಿವಮೊಗ್ಗದಲ್ಲಿ ಬಿಎಸ್‌ವೈ ಪುತ್ರ ರಾಘವೇಂದ್ರ ವಿರುದ್ಧ ಪಕ್ಷೇತರ ಸ್ಪರ್ಧೆಗಿಳಿದು ಬಂಡಾಯ ಸಾರಿದ್ದಾರೆ. ಈ ನಡುವೆ ಕಾಂತೇಶ ಕೋರ್ಟಿಗೆ ಮೊರೆ ಹೋಗಿರುವುದು ಭಾರೀ ಕುತೂಹಲ ಮೂಡಿಸಿದೆ. ಇನ್ನೂ ಕೆಲವು ಮಂದಿ ಘಟಾನುಘಟಿಗಳು ಕೋರ್ಟ್ ಮೊರೆಹೋಗಲು ಸಜ್ಜಾಗಿದ್ದಾರೆನ್ನುವ ವರ್ತಮಾನವೂ ಲಭಿಸಿದೆ.