ಮಂಗಳೂರು: ಕಂಬಳ, ಜಾತ್ರೆ, ರೈಲು ನಿಲ್ದಾಣ, ಬಸ್ಸು ನಿಲ್ದಾಣ, ರಸ್ತೆಯ ಬದಿಗಳಲ್ಲಿ ನಿಲ್ಲಿಸಿರುವ ಬೈಕ್ಗಳನ್ನು ಕದ್ದು ರಿಸೇಲ್ ಮಾಡುತ್ತಿದ್ದ ಖದೀಮರು ಕಂಕನಾಡಿ ನಗರ ಠಾಣೆಯ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಂಧಿತ ಆರೋಪಿಗಳನ್ನು ಶಿವಮೊಗ್ಗ ಮೂಲಕ ಪ್ರಸ್ತುತ ಮೂಡುಬಿದ್ರೆಯ ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಠ ಗೌಡ, ಕಾರ್ಕಳದ ಸತೀಶ್ ಬಂಗೇರ, ಮೂಡುಬಿದ್ರೆಯ ದೀಕ್ಷಿತ್, ತಾಳಿಕೋಟೆಯ ಸಂಗಣ್ಣ ಹೊನ್ನಳ್ಳಿ ಎಂದು ಗುರುತಿಸಲಾಗಿದೆ.
ಆರೋಪಿ ಮಣಿಕಂಠ ಗೌಡ ಅಂತರ್ ಜಿಲ್ಲಾ ದ್ವಿಚಕ್ರ ಕಳ್ಳನಾಗಿದ್ದು, ಈತ ರಿಸೇಲ್ ವಾಲ್ಯೂ ಹೆಚ್ಚಿರುವ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ಗಳನ್ನು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮೊದಲಾದ ಕಡೆಗಳಿಂದ ಕಳ್ಳತನ ಮಾಡುತ್ತಿದ್ದ. ಈತನಿಂದ ಕದ್ದ ಬೈಕ್ಗಳನ್ನು ಕಡಿಮೆ ಬೆಲೆಗೆ ಕೊಂಡುಕೊಂಡು ಉಳಿದ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಯಾವುದೇ ರೀತಿಯ ಸರಿಯಾದ ದಾಖಲೆಗಳಿಲ್ಲದೆ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿರುವುದಾಗಿ ಈ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಗಳೂರು ಬಂದರು, ಪಾಂಡೇಶ್ವರ, ಬಜ್ಜೆ, ಮುಲ್ಕಿ, ಉಳ್ಳಾಲ, ಕಂಕನಾಡಿ ನಗರ ಠಾಣೆ ವ್ಯಾಪ್ತಿಗೆ ಸಂಬಂಧಿಸಿದ ಹಾಗೆ 15 ಪ್ರಕರಣಗಳು ಹಾಗೂ ಬಂಟ್ವಾಳ ನಗರ, ಗ್ರಾಮಾಂತರ, ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ಐದು ಪ್ರಕರಣ ಸೇರಿ 20 ಕೇಸುಗಳನ್ನು ಈ ಆರೋಪಿಗಳ ವಿರುದ್ಧ ಪತ್ತೆ ಮಾಡಲಾಗಿದೆ. ಕಳ್ಳತನ ಮಾಡಿ ಬಚ್ಚಿಡಲಾಗಿದ್ದ 20 ಕ್ಕೂ ಅಧಿಕ ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೈಕ್ ಕಳವು ಪ್ರಕರಣ ಬೆನ್ನತ್ತಿದ ಕಂಕನಾಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.