ಮಂಗಳೂರು: 2022ರ ಎಪ್ರಿಲ್ 16ರಂದು ಎಂಎಸ್ಇಝಡ್ (ಮಂಗಳೂರು ವಿಶೇಷ ಆರ್ಥಿಕ ವಲಯ)ನಲ್ಲಿರುವ ಮೀನು ಸಂಸ್ಕರಣಾ ಕಂಪೆನಿಯೊಂದರಲ್ಲಿ ಘೋರ ದುರಂತವೊಂದು ಸಂಭವಿಸಿತು.
ಮೀನು ಸಂಸ್ಕರಣಾ ಕಂಪೆನಿಯ ತ್ಯಾಜ್ಯ ಸಂಗ್ರಹ ತೊಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಕುಸಿದು ಬೀಳುತ್ತಾನೆ. ಈತನನ್ನು ರಕ್ಷಿಸಲೆಂದು ಕೆಲಸ ಮಾಡುತ್ತಿದ್ದ ಸುಮಾರು ಏಳು ಮಂದಿ ತೊಟ್ಟಿಗೆ ಇಳಿದರು. ಆಮೇಲೆ ನಡೆದಿದ್ದು ಮಾತ್ರ ಮನುಕುಲವೇ ತಲೆ ಎತ್ತಲು ಸಾಧ್ಯವಾಗದಂತಹ ಘೋರ ದುರಂತ.
ಹೌದು ಈ ದುರಂತದಲ್ಲಿ ಬರೋಬ್ಬರಿ 5 ಮಂದಿ ಇಹಲೋಕ ತ್ಯಜಿಸಿದರು. ಮೃತಪಟ್ಟ ಇಷ್ಟೂ ಮಂದಿ ಪಶ್ಚಿಮ ಬಂಗಾಳದವರು. ಇಂಥದೊಂದು ಘೋರ ದುರಂತ ಸಂಭವಿಸಿದ ಮೇಲೂ ಅಲ್ಲಿನ ಪರಿಸ್ಥಿತಿ ಸುಧಾರಿಸಬೇಕಿತ್ತು. ಆದರೆ ಅಲ್ಲಿನ ಪರಿಸ್ಥಿತಿ ಸುಧಾರಿಸಿದ್ದೇ ಇಲ್ಲ ಎನ್ನುವುದು ಇದೀಗ ಬಯಲಾಗಿದೆ.
ಆರೋಪವೇನು?
ನಿಜ ಹೇಳಬೇಕೆಂದರೆ ಈ ಫಿಶ್‌ಮೀಲ್ ಕಾರ್ಖಾನೆ ಎನ್ನುವುದೇ ಈ ಭೂಮಿ ಮೇಲಿನ ನರಕ ಎನ್ನುವಷ್ಟು ಗಬ್ಬೆದ್ದು ಹೋಗಿದೆ. ಇಲ್ಲಿನ ದುಸ್ಥಿತಿ ಬಗ್ಗೆ ಸಂಬಂಧಪಟ್ಟವರಿಗೆ ಅನೇಕ ಬಾರಿ ಮನವಿ ಮಾಡಿದರೂ ಸುಧಾರಿಸಿಲ್ಲ. ಹಾಗಾದರೆ ಸೆಝ್ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮತ್ತು ಅಧಿಕಾರಿಗಳಿಗೆ ಬರೆದ ಮನವಿಯಲ್ಲಿ ಇಲ್ಲಿನ ಮೀನು ಸಂಸ್ಕರಣಾ ಘಟಕದ ಕರ್ಮಕಾಂಡ ಬಯಲಾಗಿದೆ.
ಲಾಭಕ್ಕಾಗಿ ನಿಯಮಗಳನ್ನೇ ಗಾಳಿಗೆ ತೂರಿದರೇ?
ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ (SEZ) ಪರಿಸರ ವಿರೋಧಿ ಮತ್ತು ಆರೋಗ್ಯ ಬಿಕ್ಕಟ್ಟು ಎದುರಿಸುವಂತಹ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ SEZ ಅಧಿಕಾರಿಗಳು ಮತ್ತು ಮಾಲಿನ್ಯ ಇಲಾಖೆಗೆ ಪದೇ ಪದೇ ದೂರು ನೀಡಿದರೂ, ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.
ಮಂಗಳೂರು SEZ ವ್ಯಾಪ್ತಿಯಲ್ಲಿ ಹಲವಾರು ಮೀನುಮೀಲ್ ಸಂಸ್ಕರಣಾ ಘಟಕಗಳಿದ್ದು ಇವೆಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ಸ್ಥಾವರಗಳಲ್ಲಿ SEZ ನಿಯಮಗಳನ್ನು ಮೀರಿ ಘಟಕಗಳು ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಕಾರ್ಯನಿರ್ವಿಸುತ್ತಿರುವ ಸುರಿಮಿ ಮೀನು ಸಂಸ್ಕರಣಾ ಘಟಕಗಳು ಮೀನುಗಳ ಉಪಉತ್ಪನ್ನಗಳನ್ನು ಮಾತ್ರ ಬಳಸಿ ಸಂಸ್ಕರಿಸುವುದಾಗಿ ಹೇಳಿಕೊಂಡು ಪರವಾನಿಗೆಯನ್ನು ಪಡೆದುಕೊಂಡಿವೆ.
ವಾಸ್ತವದಲ್ಲಿ ಅಲ್ಲಿ ನಡೆಯುತ್ತಿರುವುದೇ ಬೇರೆ…?!!!
ಯಾಕೆಂದರೆ ಇಲ್ಲಿ ಪೂರೈಕೆದಾರರಿಂದ ಇಡೀ ಮೀನುಗಳನ್ನು ಖರೀದಿಸಿ ಅದನ್ನು ಬೃಹತ್ ಪ್ರಮಾಣದಲ್ಲಿ ಸಂಸ್ಕರಿಸುವ ಮೂಲಕ ಪರವಾನಿಗೆಯನ್ನು ದುರುಪಯೋಗ ಪಡಿಸಲಾಗುತ್ತಿದೆ.
ಇಲ್ಲಿನ ಸ್ಥಾವರಗಳಲ್ಲಿ ಅನುಮತಿಸಿದ್ದಕ್ಕಿಂತ 5-6 ಪಟ್ಟು ಹೆಚ್ಚು ಸಾಮರ್ಥ್ಯದ ಯಂತ್ರಗಳನ್ನು ಸ್ಥಾಪಿಸಲಾಗಿದೆ. ತನಿಖೆಯಲ್ಲೂ ಇಲ್ಲಿರುವ ಯಂತ್ರಗಳು 10 ಪಟ್ಟು ದೊಡ್ಡದಾಗಿದೆ ಎನ್ನುವುದನ್ನು ಬಹಿರಂಗಪಡಿಸಿವೆ. ಲಾಭದ ಉದ್ದೇಶದಿಂದ ಪರಿಸರ ಮತ್ತು ಸಾರ್ವಜನಿಕರ ಆರೋಗ್ಯವನ್ನು ಕಾಪಾಡಬೇಕಾದ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ.
ಇದಲ್ಲದೆ, SEZ ಗೆ ಮೀನುಗಳನ್ನು ಸಾಗಿಸಲು ಬಳಸಲಾಗುವ ಟ್ರಕ್‌ಗಳು ಮೀನಿನ ತ್ಯಾಜ್ಯವನ್ನು ರಸ್ತೆಗಳಲ್ಲಿ ಸುರಿಯುತ್ತಿವೆ. ಇದು ಇನ್ನಷ್ಟು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದಷ್ಟೇ ಅಲ್ಲದೆ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ.
ಹಾಗಾಗಿ ಇಲ್ಲಿ ನಿಯಮ ಮೀರಿ ಪ್ರಮಾಣ ಪತ್ರ ಹಾಗೂ ರಫ್ತು ಪರವಾನಿಗೆಗಳನ್ನು ಪಡೆದಿರುವ ಬಗ್ಗೆ ಅನುಮಾನವಿದ್ದು ಈ ಬಗ್ಗೆ ತನಿಖೆ ನಡೆಯಬೇಕಿದೆ ಎನ್ನುವುದು ಅಧಿಕಾರಿಗಳಿಗೆ ನೀಡಿ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕ್ರಮಕ್ಕೆ ಆಗ್ರಹ!
ಈ ಅಕ್ರಮ ಫಿಶ್‌ಮೀಲ್ ಸಂಸ್ಕರಣಾ ಘಟಕಗಳನ್ನು ಮುಚ್ಚುವುದು ಮತ್ತು ನಿಯಮ ಮೀರಿದ ಕಾರಣ ಈ ಸಮಸ್ಯೆಗಳಿಗೆ ಕಾರಣರಾದ ಅಪರಾಧಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
ಪರಿಸರಕ್ಕೆ ಮಾರಕ!
ಇಲ್ಲಿ ನಡೆಯುವ ಕಾರ್ಯವು ಪರಿಸರದ ನಾಶಕ್ಕೆ ಕಾರಣವಾಗುವುದಷ್ಟೇ ಅಲ್ಲದೆ ಅಂತರ್ಜಲವನ್ನು ಕಲುಷಿತಗೊಳಿಸುತ್ತದೆ. ನಮ್ಮ ಪ್ರವಾಸೋದ್ಯಮ ಮತ್ತು ನಮ್ಮ ನಾಗರಿಕರ ಆರೋಗ್ಯದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರುತ್ತದೆ. ವಿಶೇಷವಾಗಿ ಬಡವರು ಮತ್ತು ದುರ್ಬಲರು ಮಾತ್ರವಲ್ಲದೆ ಈ ರಾಕ್ಷಸ ನಿಗಮಗಳ ಅನಿಯಂತ್ರಿತ ಚಟುವಟಿಕೆಗಳಿಂದಾಗಿ ದೇಶ ಗಮನಾರ್ಹ ಪ್ರಮಾಣದ ಹಣಕಾಸು ನಷ್ಟವನ್ನೂ ಅನುಭವಿಸುತ್ತದೆ.
ಮನವಿಯಲ್ಲಿರುವ ಬೇಡಿಕೆಗಳೇನು?
ಮಂಗಳೂರು SEZ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಫಿಶ್‌ಮೀಲ್ ಸಂಸ್ಕರಣಾ ಘಟಕಗಳನ್ನು ಕೂಡಲೇ ಮುಚ್ಚಬೇಕು. ಈ ಸ್ಥಾವರಗಳಿಗೆ ಪರವಾನಗಿ ಮತ್ತು ಪ್ರಮಾಣಪತ್ರಗಳ ವಿತರಣೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದು. ಈ ಘೋರ ಉಲ್ಲಂಘನೆಗಳ ಬಗ್ಗೆ ಕಣ್ಣು ಮುಚ್ಚಿ ಕುಳಿತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುದು. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು SEZ ಅಧಿಕಾರಿಗಳು ಮತ್ತು ಮಾಲಿನ್ಯ ಇಲಾಖೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಖಚಿತಪಡಿಸಿಕೊಳ್ಳುವುದು. ವೈದ್ಯಕೀಯ ನೆರವು, ಶುದ್ಧ ಗಾಳಿ ಮತ್ತು ನೀರು ಮತ್ತು ಮಾಲಿನ್ಯ ತಡೆಗಟ್ಟುವಿಕೆ ಸೇರಿದಂತೆ ಪೀಡಿತ ಸಮುದಾಯಗಳಿಗೆ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸುವುದು.