ಬೆಂಗಳೂರು: ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಆದೇಶ ಹೊರಡಿಸಿದೆ. ಅದಕ್ಕೂ ಮುನ್ನ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್, ಬಿ.ಪಿ. ಹರೀಶ್, ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮೊದಲಾದವರಿಗೆ ಶಿಸ್ತು ಉಲ್ಲಂಘನೆ ಮಾಡಿದ ಕಾರಣ ನೀಡಿ ಶೋಕಾಸ್ ನೊಟೀಸ್ ನೀಡಿ ಬಿಜೆಪಿ ಬಿಸಿ ಮುಟ್ಟಿಸಿತ್ತು ಯತ್ನಾಳ್ ಉಚ್ಛಾಟನೆ ಸಾರ್ವಜನಿಕ ವಲಯದಲ್ಲಿ ಅಚ್ಚರಿ ಉಂಟು ಮಾಡುದ್ದು, ಅವರ ಬೆಂಬಲಿಗರ ಆಕ್ರೋಶಕ್ಕೂ ಕಾರಣವಾಗಿದೆ. ಪಕ್ಷದ ವರಿಷ್ಠರ ನಿರ್ಧಾರಗಳನ್ನು ಪ್ರಶ್ನೆ ಮಾಡುವವರು ಯಾರೇ ಆದರೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಂದೇಶವನ್ನು ಯತ್ನಾಳ್ ಉಚ್ಛಾಟನೆ ಮೂಲಕ ಬಿಜೆಪಿ ರವಾನಿಸಲು ಹೊರಟಿದೆ.